ರ್ಯಾಗಿಂಗ್ ಸಂಸ್ಕೃತಿಯಿಂದ ವಿದ್ಯಾರ್ಥಿಗಳು ದೂರ ಉಳಿಯಲಿ: ನ್ಯಾ.ರಾಜೇಂದ್ರ ಬಾದಾಮಿಕರ
ತುಮಕೂರು, ಆ.2: ರ್ಯಾಗಿಂಗ್ ಸಂಸ್ಕೃತಿಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯವೇ ನಾಶವಾಗುವ ಸಂಭವ ಇರುವುದರಿಂದ ಇಂತಹ ಸಂಸ್ಕೃತಿಗಳಿಂದ ವಿದ್ಯಾರ್ಥಿಗಳು ದೂರ ಇರಬೇಕೆಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ರಾಜೀವ್‌ಗಾಂಧಿ ಸ್ವತಂತ್ರ ಪ.ಪೂ.ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಶಿರಾಗೇಟ್ ಟೂಡಾ ಲೇಔಟ್‌ನ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ರ್ಯಾಗಿಂಗ್ ಪಿಡುಗಿನ ವಿರುದ್ಧ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವಿದ್ಯಾರ್ಥಿ ಜೀವನ ಭವಿಷ್ಯ ರೂಪಿಸಿಕೊಳ್ಳುವ ಹಂತವಾಗಿದ್ದು, ಈ ಹಂತದಲ್ಲಿ ರ್ಯಾಗಿಂಗ್‌ನಂತಹ ಪಿಡುಗುಗಳು ವಿದ್ಯಾರ್ಥಿ ಬದುಕನ್ನೇ ನಾಶಪಡಿಸುತ್ತವೆ. ಈ ಬಗ್ಗೆ ಎಲ್ಲರೂ ಎಚ್ಚರದಿಂದಿರಬೇಕು ಎಂದರು.
ಕಾಲೇಜು ಹಂತದಿಂದಲೇ ಇಂತಹ ಪಿಡುಗು ಆರಂಭವಾಗುತ್ತದೆ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸಲು ಆರಂಭಿಸುತ್ತಾರೆ. ಇದು ಹೀಗೆಯೇ ಬಳುವಳಿಯಾಗಿ ಮುಂದುವರೆಯುತ್ತವೆ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳಿಗೆ ಅವಕಾಶ ಕೊಡಬಾರದು. ವಿದ್ಯಾರ್ಥಿ ಜೀವನವನ್ನು ಶಿಕ್ಷಣಕ್ಕಾಗಿಯೇ ಸದುಪಯೋಗಪಡಿಸಿಕೊಳ್ಳಬೇಕು. ಓರ್ವ ವಿದ್ಯಾರ್ಥಿ ಸಮಾಜದಲ್ಲಿ ಏನಾದರೂ ಉನ್ನತ ಹುದ್ದೆಗೆ ಹೋಗುವ ಅವಕಾಶಗಳಿರುತ್ತವೆ. ಉತ್ತಮ ಅಧಿಕಾರಿ, ಉತ್ತಮ ರಾಜಕಾರಣಿ ಹೀಗೆ ಯಾವುದೇ ಹುದ್ದೆಯನ್ನು ಅಲಂಕರಿಸಬೇಕಾದ ವಿದ್ಯಾರ್ಥಿಗೆ ರ್ಯಾಗಿಂಗ್ ಪಿಡುಗು ಮಾರಕವಾಗಿ ಪರಿಣಮಿಸಿ ಆತನ ಬದುಕನ್ನೇ ಅಂತ್ಯಗೊಳಿಸುತ್ತವೆ. ಎಷ್ಟೋ ವಿದ್ಯಾರ್ಥಿಗಳು ಇದರಿಂದ ಖಿನ್ನತೆಗೆ ಒಳಗಾಗುತ್ತಾರೆ. ಮಾನಸಿಕ ಆಘಾತದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗಿಂತ ಹೊರರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಂದಲೇ ರ್ಯಾಗಿಂಗ್ ಸಂಸ್ಕೃತಿ ಹೆಚ್ಚುತ್ತಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇಂತಹ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳಲು ಕೆಲವು ಸಮಾಜ ವಿರೋಧಿ ಶಕ್ತಿಗಳು ಹವಣಿಸುತ್ತವೆ. ಹೀಗಾಗಿ ಇಂತಹ ಪಿಡುಗನ್ನು ಹೋಗಲಾಡಿಸುವತ್ತ ಒಟ್ಟಾರೆ ಸಮಾಜ ಶ್ರಮಿಸಬೇಕು ಎಂದು ನ್ಯಾ.ರಾಜೇಂದ್ರ ಬಾದಾಮಿಕರ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ್ ಜಿನರಾಳ್ಕರ್ ಮಾತನಾಡಿ, ವಿದ್ಯಾರ್ಥಿ ಜೀವನ ತುಂಬಾ ಅಮೂಲ್ಯವಾದುದು. ಈ ಹಂತದಲ್ಲಿ ಬೇರೆ ಆಲೋಚನೆಗಳು ಬರಬಾರದು. ನಮ್ಮ ಸಂವಿಧಾನದಲ್ಲಿ ಶಿಕ್ಷಣದ ಹಕ್ಕನ್ನು ನೀಡಲಾಗಿದೆ. ಅವಕಾಶ ವಂಚಿತರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸರಕಾರದ ಈ ಯೋಜನೆಗಳು ಎಲ್ಲರನ್ನೂ ತಲುಪುವಂತಾಗಬೇಕು. ಸೌಲಭ್ಯ ಬಳಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕೇ ಹೊರತು ಕೆಟ್ಟ ಹಾದಿ ತುಳಿಯಬಾರದು. ಕಾಲೇಜುಗಳಲ್ಲಿ ರ್ಯಾಗಿಂಗ್ ಪಿಡುಗು ತಡೆಗಟ್ಟಲು ಸಮಿತಿಗಳನ್ನು ರಚಿಸಲಾಗುತ್ತದೆ. ನೊಂದವರು ದೂರು ನೀಡಬಹುದಾಗಿದೆ. ವಿವಿಧ ಕಾನೂನುಗಳ ಅಡಿಯಲ್ಲಿ ರ್ಯಾಗಿಂಗ್ ಮಾಡಿದವರಿಗೆ ಶಿಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ವಿವರಿಸಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಮಹಮ್ಮದ್ ಅಜ್ಮದ್, ವಕೀಲರಾದ ಓಬಯ್ಯ, ಶಿಕ್ಷಕಿ ಅಂಬಿಕ ಮತ್ತಿತರರು ಪಾಲ್ಗೊಂಡಿದ್ದರು. ಕಾಲೇಜು ಪ್ರಾಂಶುಪಾಲ ಎಸ್.ಬಿ.ಗಂಗಾಧರಯ್ಯ ಅಧ್ಯಕ್ಷೀಯ ನುಡಿಗಳನ್ನಾಡಿದರು.