ವಿವಿಧಡೆಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಮೂವರ ಬಂಧನ
ದಾವಣಗೆರೆ, ಆ.3: ವಿವಿಧಡೆ ಮನೆಗಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಹರಪನಹಳ್ಳಿ ಪೊಲೀಸರು, ಒಟ್ಟು 9 ಮನೆ ಕಳ್ಳತನ ಪ್ರಕರಣ ಪತ್ತೆ ಹೆಚ್ಚಿದ್ದಾರೆ ಎಂದು ಎಎಸ್ಪಿ ಯಶೋಧ ಎಸ್. ವಂಟಿಗೋಡಿ ತಿಳಿಸಿದರು.
ನಗರದ ಮಂಡಕ್ಕಿಭಟ್ಟಿ ಕ್ವಾಟ್ರಸ್ ನಿವಾಸಿ ದಾದಾಪೀರ್ ಅಲಿಯಾಸ್ ದಾದು (27), ಭಾಷಾ ನಗರ ನಿವಾಸಿ ದಾದಾಪೀರ್ ಅಲಿಯಾಸ್ ಆಟೋ ದಾದು(27) ಹಾಗೂ ಎಸ್‌ಪಿಎಸ್ ನಗರದ ಹೊಸಕ್ಯಾಂಪ್‌ನ ಸೈಯದ್ ಸಮೀರ್(26) ಬಂಧಿತರು.
178.6 ಗ್ರಾಂ ಚಿನ್ನಾಭರಣ, 130 ಗ್ರಾಂ ಬೆಳ್ಳಿ ಆಭರಣ, ಎಲ್‌ಸಿಡಿ ಟಿವಿ, ಪಲ್ಸರ್ ಬೈಕ್ ಹಾಗೂ 11,800 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.
ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ರಾತ್ರಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಹರಪನಹಳ್ಳಿ ಡಿವೈಎಸ್‌ಪಿ ನಾಗೇಶ್ ಯು. ಐತಾಳ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಡಿ.ದುರುಗಪ್ಪ, ಪಿಎಸ್‌ಐ ರತನ್‌ಸಿಂಗ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಕಾರ್ಯಾಚರಣೆ ನಡೆಸಿ ಈ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4, ಆಜಾದ ನಗರ ಪೊಲೀಸ್ ಠಾಣೆ, ಹರಪನಹಳ್ಳಿ ಪೊಲೀಸ್ ಠಾಣೆ, ಬಸವನಗರ ಪೊಲೀಸ್ ಠಾಣೆ, ಗಾಂಧಿ ನಗರ ಪೊಲೀಸ್ ಠಾಣೆ ಹಾಗೂ ದಾವಣಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಮನೆ ಕಳ್ಳತನ ಪ್ರಕರಣ ಸೇರಿ ಒಟ್ಟು 9 ರಾತ್ರಿ ಮನೆಗಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿದೆ ಎಂದರು.
ಪ್ರಕರಣ ಪತ್ತೆ ಹಚ್ಚಿರುವ ಡಿವೈಎಸ್‌ಪಿ ನಾಗೇಶ್ ಐತಾಳ್, ಸಿಪಿಐ ಡಿ.ದುರುಗಪ್ಪ, ಪಿಎಸ್‌ಐ ರತನ್‌ಸಿಂಗ್, ಸಿಬ್ಬಂದಿಗಳಾದ ಯು.ಮಾರುತಿ, ಸಿ.ಮಲ್ಲಿಕಾರ್ಜುನ, ಅಸ್ಗರ್ ಅಲಿ, ರಮೇಶ್ ನಾಯ್ಕ, ನಾಗರಾಜ ಸುಣಗಾರ, ಜಿ.ಎಸ್.ಚಂದ್ರು, ಲಿಂಗರಾಜ ನಾಯ್ಕ, ಮಹೇಶ್, ಪ್ರಹ್ಲಾದ ನಾಯ್ಕ, ತಿರುಮಲೇಶ್, ಜಗದೀಶ್, ಮಲ್ಲೇಶ ನಾಯ್ಕ, ವಿನಾಯಕ, ಹನುಮಂತಪ್ಪ, ರಾಮಚಂದ್ರ ಜಾಧವ್, ರಮೇಶ್ ಅವರುಗಳಿಗೆ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದರು.