ಹಾಡುವಳ್ಳಿಯಲ್ಲಿ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮಸಭೆ
ಭಟ್ಕಳ, ಆ.3: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ವಲಸೆ ತಡೆಗಟ್ಟಿ, ಉದ್ಯೋಗ ಸೃಜನೆಯ ಮೂಲಕ ಬಡತನ ನಿರ್ಮೂಲನೆ ಮಾಡುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಗ್ರಾಮೀಣ ವಾಸಿಗಳು ಸಕ್ರಿಯವಾಗಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ನರೇಗಾ ಯೋಜನೆಯ ತಾಲೂಕ ಸಹಾಯಕ ನಿರ್ದೇಶಕರಾದ ವಿಶ್ವನಾಥ ಕೋಟ್ಯಾನರವರು ಕರೆ ನೀಡಿದರು.
ಅವರು ಹಾಡವಳ್ಳಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಜರುಗಿದ 2017-18 ನೇ ಸಾಲಿನ 1 ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ವಾತನಾಡುತ್ತಿದ್ದರು.
ಈ ಯೋಜನೆಯು ಅಧಿನಿಯಮದ ರೂಪದಲ್ಲಿರುವದರಿಂದ ಕಾರ್ಮಿಕರಿಗೆ ನಿರ್ದಿಷ್ಟ ಹಕ್ಕು ಬಾಧ್ಯತೆಗಳನ್ನು ಕಲ್ಪಿಸಿರುವದರಿಂದ ಇಲ್ಲಿಯ ಕಾರ್ಮಿಕರಿಗೆ ಶಾಸನಬದ್ದ ಸೌಲಭ್ಯಗಳಿದ್ದು, ಸಮಗ್ರವಾಗಿ ತಿಳಿದುಕೊಳ್ಳುವದು ಅಗತ್ಯವಿದೆ ಎಂದು ನುಡಿದರು. ತಾಲೂಕ ಸಂಯೋಜಕ ಚಿದಾನಂದ ಗೌಡರವರು ನರೇಗಾ ಯೋಜನೆಯ ವ್ಯಾಪ್ತಿ, ವಿಸ್ತಾರ ಕಾರ್ಮಿಕರ ಹಕ್ಕು, ಸೌಲಭ್ಯಗಳು ಪರಿಹಾರ ಮತ್ತಿತರ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಶೆಟ್ಟಿ, ಉಪಾಧ್ಯಕ್ಷೆ ನಾಗವೇಣಿ ಗೊಂಡ , ಸದಸ್ಯ ಗಣೇಶ ನಾಯ್ಕ ಪಂಚಾಯತ್ ಅಭಿವೃದ್ದಿ ಅಧಿಕಾರಿ ಕರಿಯಪ್ಪ ನಾಯ್ಕ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ ಲೆಕ್ಕ ಸಹಾಯಕ ವಾಸು ಬಿ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸಭೆಯ ಉದ್ದೇಶ ವಿವರಿಸಿದರು ಮತ್ತು ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.