×
Ad

ದಸರಾ ಕಾರ್ಯಾಧ್ಯಕ್ಷ ಸ್ಥಾನ ಸಾರ್ವಜನಿಕರಿಗೆ: ಹೆಚ್.ಎಂ.ನಂದಕುಮಾರ್ ಒತ್ತಾಯ

Update: 2017-08-03 19:34 IST

ಮಡಿಕೇರಿ, ಆ.3: ಮಡಿಕೇರಿ ನಗರ ದಸರಾ ಸಮಿತಿಯ ಕಾಯಾರ್ಧ್ಯಕ್ಷ ಸ್ಥಾನವನ್ನು ನಗರಸಭಾ ಸದಸ್ಯರಿಗೆ ನೀಡುವುದಕ್ಕೆ ತಮ್ಮ ವಿರೋಧವಿದೆ ಎಂದು ನಗರಸಭಾ ಸದಸ್ಯರಾದ ಎಚ್.ಎಂ.ನಂದಕುಮಾರ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ದಸರಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಿಂದಿನಿಂದಲೂ ಬೈಲಾ ಆಧಾರದಲ್ಲೇನಡೆಯುತ್ತಿದೆ. ಅದರ ಪ್ರಕಾರ ಮಡಿಕೇರಿ ನಗರ ದಸರಾ ಸಮಿತಿ ಬೈಲಾ ನಿಯಮ ಮತ್ತು ನಿಬಂಧನೆಗಳು 1987 ಪುಟಸಂಖ್ಯೆ (3) ರ ಉಲ್ಲೇಖದಂತೆ ಕಾಯಾರ್ಧ್ಯಕ್ಷರನ್ನು ಸಾರ್ವಜನಿಕ ಕ್ಷೇತ್ರದಿಂದ ಆಯ್ಕೆಮಾಡಬೇಕು.

ದೇವಾಲಯದ ಸಾರ್ವಜನಿಕ ಕ್ಷೇತ್ರದಲ್ಲಿ ಮಾನ್ಯತೆ ಪಡೆದವರಾಗಿರಬೇಕು ಮತ್ತು  ದೇವಾಲಯದ ಪ್ರತಿನಿಧಿಯಾಗಿರಬೇಕೆುನ್ನುವ ನಿಯಮವಿದೆ. ನಗರಸಭಾ ಸದಸ್ಯರಿಗೆ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ,ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಸ್ಥಾನಮೀಸಲಾಗಿರುತ್ತದೆ ಎಂದು ಬೈಲಾ ನಿಯಮ ಮತ್ತು ನಿಬಂಧನೆಗಳು ಪುಟ ಸಂಖ್ಯೆ 2,3 ಮತ್ತು 4 ರಲ್ಲಿಉಲ್ಲೇಖಿಸಿದೆ. ಹೀಗಿದ್ದರೂ ಈ ಭಾರಿ ನಗರಸಭಾ ಸದಸ್ಯರಾದ ಕೆ.ಎಸ್ ರಮೇಶ್ ಅವರು ರಾಜಕೀಯ ದಾಳವನ್ನು ಉಪಯೋಗಿಸಿ ತಾವೇ ಕಾಯಾರ್ಧ್ಯಕ್ಷರಾಗಲು ಹೊರಟಿರುವುದು ಸಮಂಜಸವಲ್ಲ ಎಂದು ನಂದಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಡ ಹಬ್ಬ ದಸರಾ ಮಡಿಕೇರಿ ನಗರಸಭೆ, ಸಂಘ ಸಂಸ್ಥೆಗಳು, ಸಾರ್ವಜನಿಕರು ಮತ್ತು ಸರ್ಕಾರದ ಸಹಯೋಗದಿಂದ ಆಚರಿಸಲ್ಪಡಬೇಕೆ ಹೊರತು ನಗರಸಭಾ ಸದಸ್ಯರಿಂದ ಮಾತ್ರ ಅಲ್ಲ. ಅಲ್ಲದೆ ಸದರಿ ಕಾಯಾರ್ಧ್ಯಕ್ಷ ಆಕಾಂಕ್ಷಿ ಕೆ.ಎಸ್.ರಮೇಶ್ ಅವರು 2013-14 ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು, ಆ ಸಂದರ್ಭ ನಿಯಮ ಬಾಹಿರ ಕ್ರಮಗಳು ನಡೆದ ಕಾರಣ  ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಅನುರಾಗ್ ತಿವಾರಿ ಅವರು 2014 ರಲ್ಲಿ ಇಡೀ ದಸರಾ ಸಮಿತಿಯನ್ನು ಅಘೋಷಿತ ಅಮಾನತಿನಲ್ಲಿಟ್ಟು ದಸರಾವನ್ನು ಜಿಲ್ಲಾಡಳಿತದ ಮೂಲಕ ನಡೆಸಬೇಕಾಯಿತು ಎಂದು ನಂದಕುಮಾರ್ ಆರೋಪಿಸಿದ್ದಾರೆ.

ಜಿಲ್ಲಾಡಳಿತದ ಅಸಮಾಧಾನಕ್ಕೆ ಕಾರಣವಾಗಿದ್ದ ವ್ಯಕ್ತಿ ಇದೀಗ ಕಾಯಾರ್ಧ್ಯಕ್ಷರಾಗಲು ಲಾಬಿ ನಡೆಸುತ್ತಿರುವುದು ಮಡಿಕೇರಿ ದಸರಾ ವೈಭವಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಟೀಕಿಸಿದ್ದಾರೆ.

ದಶಮಂಟಪ ಸಮಿತಿ, ಕರಗ ಸಮಿತಿಯ ಸದಸ್ಯರಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದು ,ಉತ್ತಮ ವ್ಯಕ್ತಿತ್ವ ಹೊಂದಿರುವ ದಕ್ಷ ವ್ಯಕ್ತಿಯನ್ನು ಕಾಯಾರ್ಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಸೂಕ್ತ. ಇದು ಆಗದಿದ್ದಲ್ಲಿ ಕಳೆದ ಭಾರಿಯ ಕಾರ್ಯಾಧ್ಯಕ್ಷರನ್ನೇ ಈ ಅವಧಿಗೂ ಮುಂದುವರಿಸಿ ಬೈಲಾ ತಿದ್ದುಪಡಿ ಅಂಗೀಕಾರವಾದ ನಂತರ ಮುಂದಿನ ನಡೆಯ ಬಗ್ಗೆ ಚಿಂತನೆ ನಡೆಸುವುದು ಸೂಕ್ತ ವೆಂದು ಹೆಚ್.ಎಂ.ನಂದಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News