ಚಾ.ನಗರಸಭೆಯ 9 ವಾರ್ಡ್ ಗಳು ಬಯಲು ಶೌಚಮುಕ್ತ: ಆಕ್ಷೇಪಣೆ ಪ್ರತಿಕ್ರಿಯೆಗೆ ಅವಕಾಶ
ಚಾಮರಾಜನಗರ, ಆ.3: ಚಾಮರಾಜನಗರ ನಗರಸಭೆಯ ಒಟ್ಟು 9 ವಾರ್ಡುಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಿ ಅನುಮೋದನೆ ಪಡೆಯಲಾಗಿದ್ದು, ಈ ಸಂಬಂಧ ಆಕ್ಷೇಪಣೆ ಹಾಗೂ ಪ್ರತಿಕ್ರಿಯೆ ಇದ್ದಲ್ಲಿ ಆಗಸ್ಟ್ 18ರೊಳಗೆ ಸಲ್ಲಿಸುವಂತೆ ನಗರಸಭೆ ಕೋರಿದೆ.
ಸ್ಪಚ್ಚ ಭಾರತ್ ಯೋಜನೆಯ ಉದ್ದೇಶ ಬಯಲುಶೌಚ ಮುಕ್ತ ನಗರವನ್ನಾಗಿ ಸೃಜಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಬಯಲುಶೌಚ ಮುಕ್ತ ವಾರ್ಡುಗಳನ್ನಾಗಿ ಘೋಷಿಸಬೇಕಿದೆ. ಪ್ರತಿ ವಾರ್ಡಿನಲ್ಲಿ ಬಯಲು ಶೌಚಮುಕ್ತ ವಾರ್ಡ್ ಪ್ರದೇಶ ಎಂದು ಘೋಷಿಸಲು ಆಯಾ ವಾರ್ಡಿನ ಶಾಲೆಗಳಲ್ಲಿ, ಮನೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಉಪಯೋಗಿಸುತ್ತಿರುವ ಬಗ್ಗೆ ಸ್ವಸಹಾಯ ಸಂಘಗಳು ತಮ್ಮ ವಾರ್ಡ್‌ನ ಎಲ್ಲಾ ನಿವಾಸಿಗಳ ಮನೆಯಲ್ಲಿ ಶೌಚಾಲಯ ವ್ಯವಸ್ಥೆಯಿದ್ದು ಹಾಗೂ ಉಪಯೋಗಿಸುತ್ತಿರುವ ಬಗ್ಗೆ ಉಪಘೋಷಣೆ ಪಡೆದು ಕಳೆದ ಜುಲೈ 10ರಂದು ನಡೆದ ನಗರಸಭೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಲಾಯಿತು.
ನಗರಸಭೆಯ 31 ವಾರ್ಡ್‌ಗಳ ಪೈಕಿ ದೇವಾಂಗ ಬಡಾವಣೆ (ವಾರ್ಡ್ 11), ಕೆಪಿ ಮೊಹಲ್ಲ (ವಾರ್ಡ್ 12), ಅಂಬೇಡ್ಕರ್ ಬಡಾವಣೆ (ವಾರ್ಡ್ 13), ಅಂಬೇಡ್ಕರ್ ಬಡಾವಣೆ (ವಾರ್ಡ್ 14), ಭುಜಂಗೇಶ್ವರ ಬಡಾವಣೆ (ವಾರ್ಡ್ 20), ಬಣಜಿಗರ ಬೀದಿ (ವಾರ್ಡ್ 21), ಭ್ರಮರಾಂಭ ಬಡಾವಣೆ (ವಾರ್ಡ್ 22), ಶಂಕರಪುರ ಬಡಾವಣೆ (ವಾರ್ಡ್ 23), ಹೌಸಿಂಗ್ ಬೋರ್ಡ್ ಕಾಲೋನಿ (ವಾರ್ಡ್ 26)ಗಳನ್ನು ಬಯಲುಶೌಚಮುಕ್ತ ವಾರ್ಡ್‌ಗಳೆಂದು ಘೋಷಿಸಿ ಅನುಮೋದನೆ ಪಡೆಯಲಾಗಿದೆ. ಬಯಲುಶೌಚಮುಕ್ತ ವಾರ್ಡ್‌ಗಳೆಂದು ಘೋಷಿಸಿರುವ ಬಗ್ಗೆ ಆಕ್ಷೇಪಣೆ ಪ್ರತಿಕ್ರಿಯೆ ಇದ್ದಲ್ಲಿ ನಾಗರಿಕರು ಆಗಸ್ಟ್ 18ರೊಳಗೆ ನಗರಸಭೆ ಪೌರಾಯುಕ್ತರಿಗೆ ಸಲ್ಲಿಸುವಂತೆ ಪೌರಾಯುಕ್ತ ರಾಜಣ್ಣ ಕೋರಿದ್ದಾರೆ.