ಆಮ್ ಆದ್ಮಿ ಪಾರ್ಟಿ ಪದಾಧಿಕಾರಿಗಳ ನೇಮಕ
ಹಾಸನ, ಆ.3: ನಗರದ ಕೆ.ಆರ್. ಪುರಂನಲ್ಲಿ ಇರುವ ಆಮ್ ಆದ್ಮಿ ಪಾರ್ಟಿ ಕಾರ್ಯಾಲಯದಲ್ಲಿ ನೆನ್ನೆ ಸಂಜೆ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆದು ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಅವರು ನೇಮಕಾತಿ ಪತ್ರವನ್ನು ವಿತರಿಸಿದರು.
ಆಮ್ ಆದ್ಮಿ ಪಾರ್ಟಿಯ ಹಾಸನ ಜಿಲ್ಲಾ ಸಂಚಾಲಕ ಅಕ್ಮಲ್ ಜಾವೀದ್, ನಗರಸಭೆ ಸಂಚಾಲಕ ಸುಜಿತ್ ನಾರಾಯಣ್, ಹೊಳೆನರಸೀಪುರ ತಾಲೂಕು ಸಂಚಾಲಕ ಹೇಮಂತ್ ಕುಮಾರ್, ಮಹಿಳಾ ಘಟಕ ಸಂಚಾಲಕ ಇಂದ್ರಾಣಿ, ಹೊಳೆನರಸೀಪುರ ಯುವ ಘಟಕ ಸಂಚಾಲಕ ರಂಜಿತ್, ಚನ್ನರಾಯಪಟ್ಟಣ ವಿಧಾನಸಭಾ ಸಂಚಾಲಕ ತಾಂಡವೇಶ್ವರ್, ಪುರಸಭೆ ಸಂಚಾಲಕ ರಂಗಸ್ವಾಮಿ ಇವರನ್ನು ಪಾರ್ಟಿಗೆ ನೇಮಕಾತಿ ಮಾಡಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದರು.
ನಂತರ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನಸ್ನೇಹಿ ಪಕ್ಷಕ್ಕಾಗಿ ಇಷ್ಟಪಟ್ಟಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಬಗ್ಗೆ ಅಪಾರವಾದ ಬೇಸರವನ್ನು ಈ ವೇಳೆ ನಮಗೆ ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ನಡೆಸಲಾಗುತ್ತಿರುವ ಸರಕಾರದಿಂದ ಕ್ರಾಂತಿಕಾರಿ ಆಡಳಿತದಿಂದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಜನರು ಜನಪರ ಕಾರ್ಯ ಜನಸಾಮಾನ್ಯರಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ಪ್ರತಿ ಮನೆಗೂ ಶೇಕಡ 50 ರಷ್ಟು ವಿದ್ಯುತ್ ಶುಲ್ಕ ಕಡಿತ ಮಾಡಿದೆ. ಪ್ರತಿ ಕುಟುಂಬಕ್ಕೂ 20 ಸಾವಿರ ಲೀಟರ್ ಪ್ರತಿ ತಿಂಗಳಿಗೆ ಕುಡಿಯುವ ನೀರನ್ನು ಉಚಿತ ವ್ಯವಸ್ಥೆ ಮಾಡಿದೆ. ದಿಲ್ಲಿಯಲ್ಲಿ ಡೊನೇಷನ್ ಮುಕ್ತ ಶಿಕ್ಷಣ ಪ್ರತಿ ವಿದ್ಯಾರ್ಥಿಗೂ ನೀಡಲು ಕಾನೂನು ರಚಿಸಲಾಗಿದೆ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಕಾರ್ಯವು ಮನ್ನಣೆ ಪಡೆದಿದೆ ಎಂದರು.
ಹೊಸದಾಗಿ ತಂದಂತಹ ಮೊಹಲ್ಲಾ ಚಿಕಿತ್ಸಾಲಯ ಉಚಿತವಾಗಿದೆ. ಜನತೆ ಕಟ್ಟುವ ತೆರಿಗೆ ಹಣದಲ್ಲಿ ಉಳಿತಾಯವಾಗಿ ಉಳಿದ ಹಣವನ್ನು ಜನಸಾಮಾನ್ಯರಿಗೆ ಯೋಜನೆಗಳ ಮೂಲಕ ಹಿಂದಿರುಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5 ಸಾವಿರದಿಂದ 10 ಸಾವಿರದವರೆಗೂ ವ್ಯತ ಖರ್ಚು ಆಗುವ ಬದಲು ಉಳಿತಾಯವಾಗುತ್ತಿದೆ ಎಂದು ಹೇಳಿದರು. ಸಾಂಪ್ರದಾಯಕ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಆಮ್ ಆದ್ಮಿ ಪಾರ್ಟಿ ಬಲಿಷ್ಠ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮುತ್ತಿದೆ. ಈಗಾಗಲೇ ಪಂಜಾಬ್ ಮತ್ತು ಗೋವಾದಲ್ಲಿ ತನ್ನ ಅಸಪತ್ವವನ್ನು ದಾಖಲಿಸಿದೆ ಎಂದರು. ಕರ್ನಾಟಕದಲ್ಲೂ ಜನ ಸಾಮಾನ್ಯರ ಮನೋ ಇಚ್ಛೆ ಇದ್ದಲ್ಲಿ ಇಲ್ಲೂ ಸಹ ಅದೆ ತರಹದ ಯೋಜನೆಯನ್ನು ತರಲಾಗಿ ಜನಸ್ನೇಹಿ ಸರಕಾರವನ್ನು ನೀಡುವಲ್ಲಿ ಬದ್ಧವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯ ಸಹ ಸಂಚಾಲಕ ವಿಜಯಶರ್ಮಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಹುಣೇಕರ್, ಮ್ಯಾಥ್ಯೂ ಫಿಲಿಪ್, ಪರಮೇಶ್ ಹಾಗೂ ಇತರರು ಇದ್ದರು.