ಆ.5, 6, ರಂದು ರಾಷ್ಟ್ರಮಟ್ಟದ ಶಾಸ್ತ್ರೀಯ ನೃತ್ಯೋತ್ಸವ ಕಾರ್ಯಕ್ರಮ
ಹಾಸನ, ಆ.3: ನಗರದಲ್ಲಿ ಪ್ರಪ್ರಥಮ ಬಾರಿಗೆ ಆಗಸ್ಟ್ 5 ಮತ್ತು 6 ರಂದು ರಾಷ್ಟ್ರಮಟ್ಟದ ಶಾಸ್ತ್ರೀಯ ನೃತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ನೃತ್ಯೋತ್ಸವ ವ್ಯವಸ್ಥಾಪಕಿ ಸ್ವಾತಿ.ಪಿ. ಭಾರಧ್ವಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಮಟ್ಟದ ಶಾಸ್ತ್ರೀಯ ನೃತ್ಯೋತ್ಸವ-2017 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾರತೀಯ ಸಂಸ್ಕತಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಒಂದು ಭಾಗವಾಗಿದೆ. ಶಾಸ್ತ್ರೀಯ ನೃತ್ಯವು 8 ವಿಧಧ ಶಾಸ್ತ್ರೀಯ ನೃತ್ಯಗಳಾದ ಭರತ ನಾಟ್ಯ, ಕೂಚುಪುಡಿ, ಕಥಕ್ಕಳಿ, ಮೋಹಿನಿಆಟ್ಟಂ, ಒಡಿಸಿ, ಮಣಿಪುರಿ ಹಾಗೂ ಸತ್ರಿಯಾ ಎಲ್ಲಾವನ್ನು ಒಂದೆಡೆ ಸೇರಿಸಿ ದೇಶದ ಕರ್ನಾಟಕ, ಹೈದರಾಬಾದ್, ಕಾಕಿನಾಡ್, ತಿರುಚಿ, ಚೆನೈ, ಕುದ್ದಲೂರ್, ಹೆದಲಿ, ಆಗ್ರಾ, ಒರಿಸ್ಸಾ, ತ್ರಿವೇಂಡ್ರಂ, ಮುಂಬೈ, ಗೋವಾ, ಪಾಂಡಿಚೇರಿ ಹಾಗೂ ವಾರಣಾಸಿ ಸೇರಿದಂತೆ ವಿವಿಧ ಸ್ಥಳಗಳಿಂದ ಖ್ಯಾತ ಕಲಾವಿದರನ್ನು ಆಹ್ವಾನಿಸಲಾಗಿದೆ ಎಂದರು.
ಎರಡು ದಿನಗಳು ಶಾಸ್ತ್ರೀಯ ಸಂಗೀತ ಪರಿಚಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಕಾರ್ಯಕ್ರಮಕ್ಕೆ ಮೂರು ವರ್ಷದ ಮಗುವಿನಿಂದ 40 ವರ್ಷಗಳ ವಯೋಮಾನದ 160 ಪ್ರತಿಭಾವಂತ ಕಲಾವಿದರು ಶಾಸ್ತ್ರೀಯ ನತ್ಯೋತ್ಸದಲ್ಲಿ ಭಾಗವಹಿಸುವರು. ಹೊರ ರಾಜ್ಯದ ಕಲಾವಿದರಿಗೆ ಹಾಗೂ ಪೋಷಕರಿಗೆ ರಾಜ್ಯದ ಆಹಾರ ತಯಾರಿಸಿ ವಿತರಿಸುವುದಾಗಿ ಹೇಳಿದರು.
ಇದುವರೆಗೆ ವೈಯಕ್ತಿವಾಗಿ ದೇಶದಾದ್ಯಂತ 1050 ನತ್ಯ ಪ್ರದರ್ಶನಗಳನ್ನು ನೀಡಿದ್ದೇನೆ. ಜಿಲ್ಲೆಯಲ್ಲಿ ಮೊದಲಿಗೆ ಹಮ್ಮಿಕೊಂಡಿರುವ ನತ್ಯೋತ್ಸವಕ್ಕೆ ಸ್ಥಳೀಯ ಕಲಾವಿದರಿಂದ ಪ್ರೋತ್ಸಾಹ ಪಡೆಯಲಾಗಿದೆ. ಆಗಸ್ಟ್ 5 ಮತ್ತು 6 ರ ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೂ ಎರಡು ದಿನಗಳ ಕಾಲ ಶಾಸ್ತ್ರೀಯ ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಹಾಸನ ವಿಶ್ವದಾದ್ಯಂತ ನಾಡು, ನುಡಿ, ಕಲೆ, ಸಂಗೀತ ಹಾಗೂ ಸಾಹಿತ್ಯಕ್ಕೆ ತನ್ನದೇ ಕೊಡುಗೆ ನೀಡಿದೆ. ವಿಶ್ವ ವಿಖ್ಯಾತ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಮಂಜರಾಬಾದ್ ಕೋಟೆ, ರಾಮನಾಥಪುರ ಹಾಗೂ ಚಿಕ್ಕ ತಿರುಪತಿ ಅಂತಹ ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ಜಿಲ್ಲೆಯ ಹಿರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಇಂತಹ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನೆರವಾಗಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ನೃತ್ಯೋತ್ಸವ ಅಧ್ಯಕ್ಷೆ ಕೆ.ಆರ್. ಅನಿತಾ, ಎಂ.ಕೆ. ಪ್ರಕಾಶ್, ರೇಖಾ ಸತೀಶ್ ಉಪಸ್ಥಿತರಿದ್ದರು.