ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಿಂದ ತೋಂಟದ ಶ್ರೀಗಳ ಭೇಟಿ
ಗದಗ,ಆ.3: ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಜಗದ್ಗುರು ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬ ವೀರಶೈವ ಮಹಾಸಭೆಯ ಇತ್ತೀಚಿನ ನಿರ್ಣಯದ ಬಗೆಗೆ ವಿಷಯ ಪ್ರಸ್ತಾಪಿಸಿದರು, ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶ್ರೀಗಳು “ವೀರಶೈವ ಲಿಂಗಾಯತ ಎರಡೂ ಒಂದೇ ಅಲ್ಲ. ಅವು ಎಣ್ಣೆ-ನೀರು ಇದ್ದಂತೆ, ಅವುಗಳು ಎಂದೂ ಕೂಡುವುದಿಲ್ಲ. ಅಖಿಲ ಭಾರತ ವೀರಶೈವ ಮಹಾಸಭೆಯು ಲಿಂಗಾಯತ ಸಮಾಜದ ಹಿತವನ್ನು ಕಾಪಾಡುವುದು ಬಿಟ್ಟು ಕೆಲವು ಸ್ವಾಮೀಜಿಗಳ ಹಿತವನ್ನು ಕಾಪಾಡುತ್ತಿದೆ. ಆದರೇ ಬದ್ಧತೆಯುಳ್ಳ ಸ್ವಾಮೀಜಿಗಳಾದ ನಾವು ಸಮಾಜದ ಹಿತವನ್ನು ಕಾಪಾಡಬೇಕೇ ವಿನ: ಸ್ವಾರ್ಥಿಗಳ, ಕೆಲವು ಸ್ವಾಮೀಜಿಗಳ ಹಿತವನ್ನಲ್ಲ ಎಂದರು. ವೀರಶೈವ ಮಹಾಸಭೆಯು ಇರುವುದು ಸ್ವಾಮೀಜಿಗಳ ಸಲುವಾಗಿ, ನಾವು ಇರುವುದು ಸಮಾಜದ ಸಲುವಾಗಿ” ನಮ್ಮ ದಾರಿ ನಮಗೆ ನಿಮ್ಮ ದಾರಿ ನಿಮಗೆ ಎಂದು ಶ್ರೀಗಳು ಖಾರವಾಗಿ ಪ್ರತಿಕ್ರಿಯಿಸಿದರು.
ಮುಂದುವರೆದು ಮಾತನಾಡುತ್ತಾ “ವೀರಶೈವ ಮತ್ತು ಲಿಂಗಾಯತ ಧರ್ಮಕ್ಕೆ ಅಜಗಜಾಂತರ ವ್ಯತ್ಯಾಸವಿದೆ, ವೀರಶೈವ ಬಸವಣ್ಣನವರನ್ನು ಒಪ್ಪುವುದಿಲ್ಲ. ವೀರಶೈವ ಧರ್ಮ ಆಗಮ-ಉಪನಿಷತ್ತುಗಳನ್ನು ಆಧರಿಸಿದೆ, ಬಹುದೇವೊಪಾಸನೆಯನ್ನು ಪ್ರತಿಪಾದಿಸುತ್ತದೆ, ಹೋಮ-ಹವನಗಳನ್ನು ಆಚರಿಸುತ್ತದೆ, ಅಸ್ಪೃಶ್ಯತೆಯನ್ನು ಎತ್ತಿ ಹಿಡಿಯುತ್ತದೆ.
12ನೇ ಶತಮಾನದಲ್ಲಿ ವರ್ಣಭೇದ-ವರ್ಗಭೇದಗಳನ್ನು ಧಿಕ್ಕರಿಸಿ ಇಷ್ಟಲಿಂಗದ ಮೂಲಕ ಎಲ್ಲ ಕಾಯಕಜೀವಿಗಳನ್ನು ಒಂದಗೂಡಿಸಿದ ಕೀರ್ತಿ ಲಿಂಗಾಯತ ಧರ್ಮಕ್ಕೆ ಸಲ್ಲುತ್ತದೆ. ಬಸವ ತತ್ವವು ಈ ದೇಶವನ್ನು ಜಾತಿ-ವ್ಯವಸ್ಥೆಯಿಂದ, ಕೋಮುವಾದದಿಂದ ರಕ್ಷಿಸುವ ಸಾಮರ್ಥ್ಯ ಹೊಂದಿದೆ.
ಒಂದು ವೇಳೆ ಭಾರತವು ಬಸವೇಶ್ವರರ ತತ್ವಗಳನ್ನು ಕಡೆಗಣಿಸಿದರೆ, ಭಾರತ ವಿಕೃತ ದೇಶವಾಗಿ ಮಾರ್ಪಡುತ್ತದೆ. ಸಂತರು-ದಾಸರು, ಅನುಭಾವಿ ಕವಿಗಳು ಮತ್ತು ದಕ್ಷಿಣ ಭಾರತಕ್ಕೆ ಬಂದ ಸೂಫಿಗಳು 12ನೇ ಶತಮಾನದ ನಂತರ ಬಂದವರಾಗಿದ್ದಾರೆ. ಪುರೋಹಿತಶಾಹಿಗಳು ಶರಣರ ಮೂಲ ವಚನಗಳನ್ನು ತಮ್ಮ ಅನೂಕೂಲಕ್ಕೆ ತಕ್ಕಂತೆ ತಿದ್ದಿದ್ದಾರೆ, ಅನೇಕ ಖೊಟ್ಟಿ ವಚನಗಳನ್ನು ಸೇರಿಸಿದ್ದಾರೆ, ಹೀಗೆಲ್ಲ ಮಾಡುವುದರ ಮೂಲಕ ಲಿಂಗಾಯತ ಮತ್ತು ವೀರಶೈವ ಎರಡೂ ಒಂದು ಎಂದು ಗೊಂದಲ ಸೃಷ್ಠಿಸಿದ್ದಾರೆ, ಇಂದು ಆ ಗೊಂದಲ ಇತ್ಯರ್ಥವಾಗಬೇಕಿದೆ, ಅದಕ್ಕೆ ಕಾಲ ಪಕ್ವವಾಗಿದೆ, ಸರ್ಕಾರ ಬೌಧ್ದರಿಗೆ-ಜೈನರಿಗೆ ನೀಡಿದಂತೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮತ್ತು ಸ್ವತಂತ್ರ ಧರ್ಮದ ಮಾನ್ಯತೆ ನೀಡುವುದು ಅಗತ್ಯವಾಗಿದೆ ಎಂದು ಶ್ರೀಗಳು ಮನವರಿಕೆ ಮಾಡಿಕೊಟ್ಟರು ಮತ್ತು ಶರಣರ ತತ್ವದ ಅಡಿಯಲ್ಲಿ ಮಹಾಸಭೆಯನ್ನು ಮುನ್ನಡೆಸಿದರೇ ಅದಕ್ಕೆ ಭವಿಷ್ಯತ್ತು ಇದೆ, ಇಲ್ಲವಾದರೇ ಅದಕ್ಕೆ ಭವಿಷ್ಯತ್ತು ಇಲ್ಲ.”
“ಇಲ್ಲವಾದರೇ ಅದು ರಾತ್ರಿ ಕಂಡ ಬಾವಿಯಲ್ಲಿ ಹಗಲಿನಲ್ಲಿ ಬಿದ್ದಂತಾಗುವುದು. ಶ್ರೀಮಂತರು, ಅಧಿಕಾರವಂತರು ಮಹಾಸಭೆಯಲ್ಲಿದ್ದು ಏನು ಮಾಡಿದರೂ ನಡೆಯುತ್ತದೆ ಎನ್ನುವದು ತಪ್ಪು ಎಂದು ಶ್ರೀಗಳು ಹೇಳಿದರು. ಅದಕ್ಕೂ ಮೊದಲು ಶ್ಯಾಮನೂರು ಶಿವಶಂಕರಪ್ಪನವರ ವೈಯಕ್ತಿಕ ದಾನಧರ್ಮದ ಗುಣವನ್ನು ಮತ್ತು ತಿಪ್ಪಣ್ಣವರಿಗೆ ಲಿಂಗಾಯತ ಧರ್ಮದ ಬಗೆಗೆ ಇರುವ ಬದ್ಧತೆಯನ್ನು ಶ್ರೀಗಳು ಪ್ರಶಂಸಿದರು.