ಕೊಡಗಿನಲ್ಲಿ ಮೈಸೂರು ಟ್ಯಾಕ್ಸಿ ವಾಲಾ ಸಂಸ್ಥೆ ಕಾರ್ಯಾರಂಭ
ಮಡಿಕೇರಿ, ಆ.4: ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ಪಕ್ಕದ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೈಸೂರಿನ ಮೈಸೂರು ಟ್ಯಾಕ್ಸಿ ವಾಲಾ ಸಂಸ್ಥೆ ತನ್ನ ಕಾರ್ಯವ್ಯಾಪ್ತಿಯನ್ನು ಕೊಡಗು ಜಿಲ್ಲೆಗೂ ವಿಸ್ತರಿಸಲು ನಿರ್ಧರಿಸಿದೆ. ತಾಂತ್ರಿಕವಾಗಿ ಗುಣಮಟ್ಟದ ಸೇವೆಯನ್ನು ಒದಗಿಸಲು ಮುಂದಾಗಿರುವ ಸಂಸ್ಥೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆಯ ಸ್ಥಾಪಕರಾದ ಎ. ಚೇತನ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯು ಸುಮಾರು 117 ವಾಹನಗಳನ್ನು ಹೊಂದಿದ್ದು, ಇವುಗಳಲ್ಲಿ 20 ವಾಹನಗಳು ಕೊಡಗಿನಲ್ಲಿ ಇಂದಿನಿಂದ ಸೇವೆಯನ್ನು ಆರಂಭಿಸಿವೆ ಎಂದರು. ಸ್ಥಳೀಯರೊಂದಿಗೆ ಪೈಪೋಟಿಗೆ ಇಳಿಯದೆ, ಜಿಲ್ಲೆಯೊಳಗೆ ದಿನವೊಂದಕ್ಕೆ ಕನಿಷ್ಠ 2 ಸಾವಿರ ರೂ.ಗಳಂತೆ ದರ ನಿಗದಿ ಮಾಡಲಾಗುವುದು. ಕಿಲೋ ಮೀಟರ್‌ಗೆ 7 ರೂ.ಗಳನ್ನು ಪಡೆಯಲಾಗುವುದೆಂದು ತಿಳಿಸಿದರು. ಕುಶಾಲನಗರದಲ್ಲಿ ಕೇಂದ್ರ ಕಛೇರಿ ಕಾರ್ಯ ನಿರ್ವಹಿಸಲಿದ್ದು, ವಾಹನದ ಪ್ರತಿಯೊಬ್ಬ ಚಾಲಕ ಕೇವಲ ಚಾಲಕನಲ್ಲದೆ ಪ್ರವಾಸಿಗರೊಂದಿಗೆ ಗೈಡ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕೊಡಗು ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದೆ. ಆದರೆ, ಪ್ರವಾಸಿಗರಿಗೆ ಮಾಹಿತಿಯ ಕೊರತೆ ಇದ್ದು, ಗೈಡ್‌ಗಳ ಅವಶ್ಯಕತೆ ಇದೆ. ಇದನ್ನು ನಮ್ಮ ಸಂಸ್ಥೆ ತುಂಬಲಿದೆಯೆಂದು ತಿಳಿಸಿದ ಚೇತನ್ ಕುಮಾರ್, ಸಂಸ್ಥೆಯ ವಾಹನಗಳಲ್ಲಿ ಜಿಪಿಎಸ್ ಇರುವುದರಿಂದ ತಾಂತ್ರಿಕವಾಗಿಯೂ ಉತ್ತಮ ಸೇವೆ ಲಭಿಸಲಿದೆ ಎಂದರು. ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಿಸಿಕೊಡುವುದಾಗಿ ಭರವಸೆ ನೀಡಿದ ಅವರು, ನಿವೃತ್ತ ಸೈನಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಕಛೇರಿಯ ವ್ಯವಸ್ಥಾಪಕ ಇಂದ್ರೇಶ್, ಸಂಸ್ಥೆಯ ತಾಂತ್ರಿಕ ವಿಭಾಗದ ಪ್ರಮುಖರಾದ ಕೆ.ಬಿ. ಸುನಿಲ್ ಕುಮಾರ್ ಹಾಗೂ ಜಗದೀಶ್ ಚಂದ್ರು ಉಪಸ್ಥಿತರಿದ್ದರು.