×
Ad

ಭೂಮಿಯ ಹಕ್ಕಿಗಾಗಿ ರೈತ ಸಂಘದಿಂದ ಪ್ರತಿಭಟನೆ

Update: 2017-08-04 17:15 IST

ಮಡಿಕೇರಿ ಆ.4 : ರಾಜ್ಯ ಸರ್ಕಾರ ಹಲವಾರು ಭಾಗ್ಯಗಳನ್ನು ಘೋಷಣೆ ಮಾಡುತ್ತಿದ್ದು, ಅವೆಲ್ಲವೂ ಬಡತನ ನಿರ್ಮೂಲನೆಯ ಶಾಶ್ವತ ಪರಿಹಾರ ಎಂಬುದರಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ, ಉಳುವವನಿಗೆ ಭೂಮಿ ಭಾಗ್ಯ ಮತ್ತು ವಾಸಿಸಲು ಯೋಗ್ಯವಾದ ಮನೆಯ ಭಾಗ್ಯವನ್ನು ಸರಕಾರ ನೀಡಲಿ ಎಂದು ಒತ್ತಾಯಿಸಿದೆ. ಹತ್ತಾರು ವರ್ಷಗಳಿಂದ ಸರ್ಕಾರಿ ಜಾಗಗಳಲ್ಲಿ ಸಾಗುವಳಿ ಮಾಡಿಕೊಂಡು ನೆಲೆ ನಿಂತಿರುವ ಭೂಹೀನ ಬಡವರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಆರ್.ಮಂಜುನಾಥ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕೆಲವು ಭೂ ಮಾಲೀಕರಿಂದ, ಬಂಡವಾಳಶಾಹಿಗಳಿಂದ, ಮಠಗಳಿಂದ, ರೆಸಾರ್ಟ್, ಭೂ ಮಾಫಿಯಾಗಳಿಂದ ಸಾವಿರಾರು ಎಕರೆ ಸರಕಾರಿ ಭೂಮಿ ಅತಿಕ್ರಮಣವಾಗಿದೆ ಎಂದು ಆರೋಪಿಸಿದರು.

ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕು, ಮಲೆನಾಡಿನ ಭೂಮಿತಿ ಕಾಯ್ದೆ ಜಾರಿಯಾಗಬೇಕು, ಜಿಲ್ಲೆ ವಿವಿಧ ಭಾಗಗಳಲ್ಲಿ ಬಡವರು, ದಲಿತರು, ಆದಿವಾಸಿಗಳು ಹಲವಾರು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ನೆಲೆ ನಿಂತು ಕೃಷಿ ಕಾರ್ಯದಲ್ಲಿ ತೊಡಗಿದ್ದು, 1 ರಿಂದ 4 ಏಕರೆ ಜಮೀನು ಹೊಂದಿ ಜೀವನ ಸಾಗಿಸುತ್ತಿರುವವರಿಗೆ ತಕ್ಷಣ ಹಕ್ಕುಪತ್ರ ನೀಡಬೇಕು, ಕುಶಾಲನಗರ ಹೋಬಳಿಯ ಅಂದಾನಿಪುರದಲ್ಲಿ ದಲಿತರಿಗಾಗಿ ಕಾಯ್ದಿರಿಸಿದ್ದ ಜಾಗದಲ್ಲಿ 65 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು, ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ 30 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿರುವ ಅಲೆಮಾರಿ ಕೊರವ ಜನಾಂಗಕ್ಕೆ ನಿವೇಶನ ಹಂಚಬೇಕು, ಆದಿವಾಸಿಗಳಿಗೆ ನಿವೇಶನ ಹಂಚುತ್ತಿರುಂತೆ ದಲಿತರಿಗೆ ಹಾಗೂ ಕಡು ಬಡವರಿಗೂ ನಿವೇಶನ ಹಂಚಬೇಕು, ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಬಡವರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ರದ್ದುಗೊಳಿಸಬೇಕು, ದಿಡ್ಡಳ್ಳಿ ನಿರಾಶ್ರಿತ ಆದಿವಾಸಿಗಳಿಗಾಗಿ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ನಿರ್ಮಿಸುತ್ತಿರುವ ಮನೆಗಳು ಮತ್ತು ಇತರೆ ಕಾಮಗರಿಗಳ ಗುಣಮಟ್ಟ ಕಾಯ್ದುಕೊಳ್ಳಬೇಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ನಿರಾಶ್ರಿತರ ಪರವಾದ ಬೇಡಿಕೆಗಳನ್ನು ಪ್ರತಿಭಟನಾಕಾರರು ಜಿಲ್ಲಾಡಳಿತದ ಮುಂದಿಟ್ಟರು.

ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಟಿ.ಆನಂದ, ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿವರ್ಣಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಎಂ.ಎಂ.ಸಿದ್ದಯ್ಯ, ಪ್ರಮುಖರಾದ ಹೆಚ್.ಎಲ್.ಸಣ್ಣಪ್ಪ, ಕೆ.ಎಮ್ ದಿನೇಶ್, ಮನು, ಸಾವಿತ್ರಮ್ಮ, ಅನಿತ, ದೇವರಾಜು ಸಿಂಧು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News