ಜಿಲ್ಲಾಧಿಕಾರಿಗಳಿಂದ ರಾಜಾಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ
ತುಮಕೂರು,ಆ.4: ತುಮಕೂರು ಅಮಾನಿಕೆರೆಯನ್ನು ಸಂಪರ್ಕಿಸುವ ಕುಂದೂರು-ಬೆಳಗುಂಬದಲ್ಲಿರುವ ರಾಜಾಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಚಾಲನೆ ನೀಡಿದರು.
ಕಾರ್ಯಾಚರಣೆ ಸಂದರ್ಭದಲ್ಲಿ ಆಗ್ಗಿಂದಾಗ್ಗೆ ಬರುತ್ತಿದ್ದ ತುಂತುರ ಮಳೆಯ ನಡುವೆಯೇ, ಕಂದಾಯ ಮತ್ತು ಭೂಮಾಪನ ಇಲಾಖೆಯ ಅಧಿಕಾರಿಗಳಿಂದ ರಾಜಾಕಾಲುವೆಯ ಅಳತೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಕುಂದೂರು-ಬೆಳಗುಂಬದಲ್ಲಿ ತುಮಕೂರು ಅಮಾನಿಕೆರೆಯನ್ನು ಸಂಪರ್ಕಿಸುವ ರಾಜಾಕಾಲುವೆಯ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗುಂಬ-ಕುಂದೂರು, ಬೆಳಗುಂಬ, ಮುತ್ಸಂದ್ರ, ಸತ್ಯಮಂಗಲ ಹೀಗೆ 5 ನಾಲೆಗಳು ಹಾಗೂ ಇತರೆ ಕಾಲುವೆಗಳು ತುಮಕೂರು ಅಮಾನಿಕೆರೆಯನ್ನು ಸಂಪರ್ಕಿಸುತ್ತವೆ. ಈ ನಾಲೆಗಳ ಒತ್ತುವರಿ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯವನ್ನು ಕಳೆದ 1 ವರ್ಷದ ಹಿಂದೆಯೇ ಆರಂಭಿಸಲಾಗಿತ್ತು. ಈ ಕಾರ್ಯಾಚರಣೆ ಕಾರಣಾಂತರಗಳಿಂದ ಸ್ವಲ್ಪ ವಿಳಂಬವಾಗಿತ್ತು. ಇದೀಗ ಅದೇ ಕಾಮಗಾರಿಯನ್ನು ಸ್ಮಾರ್ಟ್ ಸಿಟಿ ಲಿ., ಕಾಮಗಾರಿಯಲ್ಲಿ ಸೇರ್ಪಡೆ ಮಾಡಿ ಇಂದಿನಿಂದ ರಾಜಾಕಾಲುವೆ ಒತ್ತುವರಿ ತೆರವು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈ ಒತ್ತುವರಿಯನ್ನು ತೆರವುಗೊಳಿಸಲು ಮಹಾನಗರಪಾಲಿಕೆ ಅಭಿಯಂತರರು, ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಯ ತಲಾ ಮೂರು ಸದಸ್ಯರನ್ನು ಒಳಗೊಂಡ ನಾಲಾವಾರು ಹಾಗೂ ತಂಡವಾರು 5 ಉಪಕಾರ್ಯ ನಿರ್ವಹಣಾ ಸಮಿತಿಗಳನ್ನು ರಚಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಈ ಸಮಿತಿಗಳು ರಾಜಾಕಾಲುವೆಯ ಒತ್ತುವರಿಯನ್ನು ತೆರವು ೊಳಿಸುವ ಕಾರ್ಯ ಮಾಡಲಿವೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ನುಡಿದರು.
ಈ ಸಂದರ್ಭದಲ್ಲಿ ತುಮಕೂರು ತಾಲೂಕು ತಹಶೀಲ್ದಾರ್ ರಂಗೇಗೌಡ,ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಅಭಿಯಂತರಾದ ವನಿತಾ.ಬಿ, ಭೂಮಾಪನ ಇಲಾಖೆಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.