×
Ad

ತವರಿಗೆ ಆಗಮಿಸಿದ ಶಾಲಿನಿಗೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

Update: 2017-08-04 18:14 IST

ಕಡೂರು ಆ. 4: ಸಿಂಗಪುರ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಏಷ್ಯಾಖಂಡಕ್ಕೆ ಪ್ರಥಮ ಸ್ಥಾನಗಳಿಸಿ ಬಂಗಾರದ ಪದಕ ಗಳಿಸಿ ತವರಿಗೆ ಆಗಮಿಸಿದ ಶಾಲಿನಿ ಅವರಿಗೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಜೂನ್ 25 ರಿಂದ 30ರವರೆಗೆ ಸಿಂಗಪುರ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ 25 ರಿಂದ 30 ವರ್ಷ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ಶಾಲಿನಿ ಅವರು ಪ್ರಥಮ ಸ್ಥಾನ ಪಡೆದು ಬಂಗಾರದ ಪದಕಗಳಿಸಿದ್ದಾರೆ.ಶಾಲಿನಿ ಅವರು ಪಟ್ಟಣದ ಶ್ರೀ ರಾಘವೇಂದ್ರ ಯೋಗ ಶಾಲೆಯಲ್ಲಿ ಕಳೆದ 5 ವರ್ಷಗಳಿಂದ ತರಬೇತಿ ಪಡೆದು ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ನೂರಾರು ಪ್ರಶಸ್ತಿಗಳನ್ನುಪಡೆದಿದ್ದು, ಪ್ರಸ್ತುತ ಅಂತರರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿಗಳಿಸಿರುವುದು ಕಡೂರಿನ ಹೆಮ್ಮೆಯ ವಿಷಯವಾಗಿದೆ.

ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ಪ್ರಾಚಾರ್ಯ ಬಿ.ಎಂ. ಗಿರೀಶ್ ಮಾತನಾಡಿ ನಮ್ಮ ಶಾಲೆಯಲ್ಲಿ ತರಬೆತಿ ಪಡೆದ ಶಾಲಿನಿ ಅವರು ಸಿಂಗಾಪುರ್‌ನಲ್ಲಿ ನಡೆದ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ 25 ರಿಂದ 30 ಕೆ.ಜಿ. ವಿಭಾಗದಲ್ಲಿ ಏಷ್ಯಾಖಂಡಕ್ಕೆ ಪ್ರಥಮ ಸ್ಥಾನಗಳಿಸಿ ಬಂಗಾರದ ಪದಕಗಳಿಸಿರುವುದು ಹೆಮ್ಮೆ ತಂದಿದೆ ಎಂದರು.

ಶಾಲಿನಿ ಅವರು ರಾಜ್ಯ ಅಮೆಚೂರ್ ಯೋಗ ಅಸೋಷಿಯೇಷನ್ ಸ್ಪರ್ಧೆಗಳಲ್ಲಿ 9 ಬಾರಿ ಪ್ರಥಮ ಸ್ಥಾನ, 1 ಬಾರಿ ದ್ವಿತೀಯ ಸ್ಥಾನ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ 1 ಬಾರಿ ಪ್ರಥಮ, 3 ಬಾರಿ ದ್ವಿತೀಯ ಹಾಗೂ 2 ಬಾರಿ ತೃತೀಯ ಸ್ಥಾನಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದು. ಈ ಏಷ್ಯಾ ಖಂಡಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸ್ಪರ್ಧೆಯಲ್ಲಿ ಬಂಗಾರದ ಪದಕಗಳಿಸಿರುವುದು ತಾಲೂಕಿನ ಕೀರ್ತಿ ಹೆಚ್ಚಿಸಿದೆ ಎಂದು ತಿಳಿಸಿದರು.

ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ, ಇಂದು ಕ್ರೀಡೆಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಡೂರು ತಾಲೂಕಿಗೆ ಕ್ರಿಕೆಟ್‌ನಲ್ಲಿ ವೇದಾಮೂರ್ತಿ, ಯೋಗಾಸ್ಪರ್ಧೆಯಲ್ಲಿ ಶಾಲಿನಿ ಅವರುಗಳ ಸಾಧನೆ ಇಡೀ ದೇಶ ಹೆಮ್ಮೆ ಪಡುವಂತಾಗಿದೆ, ಸರ್ಕಾರ ಈ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.

ಪುರಸಭಾ ಅಧ್ಯಕ್ಷ ಎಂ. ಮಾದಪ್ಪ ಮಾತನಾಡಿದರು.
ಈ ಸಂದರ್ಭ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕೆ.ಹೆಚ್.ಎ. ಪ್ರಸನ್ನ, ವಿಶ್ವಕರ್ಮ ಸಮಾಜದ ಅಧ್ಯಕ್ಷ ನಿಂಗಚಾರ್, ನಲ್ಲರಿ ಸುರೇಶ್, ಶಿವಾನಂದ, ಸರಸ್ಪತಿಪುರ ಪುಟ್ಟೇಗೌಡ, ಶ್ರೀ ರಾಘವೇಂದ್ರ ಯೋಗ ಶಿಕ್ಷಣ ತರಬೇತುದಾರರಾದ ವಿಜಯಗಿರೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News