×
Ad

ತಾಲೂಕು ಪತ್ರಕರ್ತರ ಸಂಘದಿಂದ ಕಡೂರು ಪುರಸಭೆಯಲ್ಲಿ ಸಂವಾದ ಕಾರ್ಯಕ್ರಮ

Update: 2017-08-04 18:18 IST

ಕಡೂರು, ಆ. 4: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲೂಕು ಪತ್ರಕರ್ತರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಕಡೂರು ಪಟ್ಟಣದ ಜ್ವಲಂತ ಸಮಸ್ಯೆಗಳ ಮಹಾಪೂರವೇ ಹರಿದು ಬಂದವು.

ಪಟ್ಟಣದ ಜನತೆ ಭದ್ರಾ ಕುಡಿಯುವ ನೀರಿನ ಯೋಜನೆ ಇನ್ನೂ ಅನುಷ್ಟಾನವಾಗಿಲ್ಲ. ಕೆ.ಎಲ್.ವಿ. ವೃತ್ತಕ್ಕೆ ಕೆ.ಎಂ.ಕೆ. ವೃತ್ತ ಎಂದು ನಾಮಕರಣ ಮಾಡಿರುವ ಬಗ್ಗೆ ಟ್ರೇಡ್ ಲೈಸೆನ್ಸ್ ಪಡೆಯದೆ ವ್ಯವಹಾರ ನಡೆಸುತ್ತಿರುವ ಬಗ್ಗೆ, ಕಂದಾಯ ಬಾಕಿ ವಸೂಲಾಗಿಲ್ಲ. ಪಟ್ಟಣ ಬಯಲು ಶೌಚ ಮುಕ್ತವಾಗಿಲ್ಲ ಹೀಗೆ ಹತ್ತು ಹಲವು ಪ್ರಶ್ನೆಗಳ ಸುರಿಮಳೆಯಾಯಿತು.

ಪುರಸಭಾ ಮಾಜಿ ಅಧ್ಯಕ್ಷ ಭಂಢಾರಿ ಶ್ರೀನಿವಾಸ್ ಮಾತನಾಡಿ, ಭದ್ರಾ ಕುಡಿಯುವ ನೀರಿನ ಯೋಜನೆಯೊಂದು ಅನುಷ್ಟಾನವಾಗದಿದ್ದರೆ ಕುಡಿಯುವ ನೀರಿಗಾಗಿ ಏನು ಮಾಡಬೇಕಾಗಿತ್ತು ಎಂಬುದನ್ನು ಊಹಿಸಲು ಅಸಾದ್ಯ. ಆದರೆ ಕಡೂರು ಪಟ್ಟಣದ ಹಲವೆಡೆ ಈ ಅಮೂಲ್ಯವಾದ ನೀರನ್ನು ಪೋಲು ಮಾಡಲಾಗುತ್ತಿದೆ. ಇದೇ ನೀರಿನಿಂದ 2/3 ಹಳ್ಳಿಗಳ ನೀರಿನ ಸಮಸ್ಯೆ ಬಗೆಹರಿಸಬಹುದು. ಈ ನೀರು ಪೋಲಾಗುವುದನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಪುರಸಭೆಯ ಆರೋಗ್ಯಾಧಿಕಾರಿ ಹರೀಶ್ ಮಾತನಾಡಿ, ಭದ್ರಾ ಯೋಜನೆಯ ಅನುಷ್ಟಾನವಾಗಿದ್ದು, ಯೋಜನೆ ಇನ್ನೂ ಪುರಸಭೆಗೆ ಹಸ್ತಾಂತರವಾಗಿಲ್ಲ. ಇನ್ನು ಕುಡಿಯುವ ನೀರು ಅನಗತ್ಯವಾಗಿ ವ್ಯತ್ಯವಾಗುವುದನ್ನು ತಪ್ಪಿಸಲು ಯೋಜನೆಯ ಪೂರ್ಣ ಮಾರ್ಗದಲ್ಲಿ 8 ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದರು.
 
ಕೆ.ಟಿ. ಲವಕುಮಾರ್ ಮಾತನಾಡಿ, ಕಡೂರು ಪಟ್ಟಣದಲ್ಲಿ ಬಹು ಹಿಂದಿನಿಂದಲೂ ಇದ್ದ ಕೆ.ಎಲ್. ವಿಶ್ವನಾಥ ವೃತ್ತಕ್ಕೆ ಏಕಾಏಕಿ ಕೆ.ಎಂ.ಕೆ. ವೃತ್ತ ಎಂದು ಹೆಸರಿಡಲಾಗಿದ್ದು. ಇದಕ್ಕೆ ಸಂಬಂಧಿಸಿದವರ ಅನುಮತಿ ಪಡೆಯಲಾಗಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಿ ಎಂದು ಮನವಿ ಮಾಡಿದರು.  ಹಿರಿಯ ಸಮಾಜ ಸೇವಕ ಜಿ.ವಿ. ಮಂಜುನಾಥಸ್ವಾಮಿ ಮಾತನಾಡಿ ಕಡೂರು ಪಟ್ಟಣ ಬಯಲು ಶೌಚ ಮುಕ್ತವಾಗಿಲ್ಲ. ಅದಕ್ಕೇನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರೆ, ಕೋಟೆ ನಿವಾಸಿ ಸುರೇಶ್ ಅವರು ಕಡೂರು ಪಟ್ಟಣದಲ್ಲಿ 9 ಸ್ಮಶಾನಗಳು ಒತ್ತುವರಿಯಾಗಿದ್ದು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಎ.ಜೆ.ಪ್ರಕಾಶ್ ಮೂರ್ತಿ ವಹಿಸಿದ್ದರು.  ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್, ಕಾರ್ಯದರ್ಶಿ ಬ್ಯಾಲದಾಳು ಕುಮಾರ್, ರಾಜ್ಯ ಸಮಿತಿ ಸದಸ್ಯ ತಿಪ್ಪೇರುದ್ರಪ್ಪ, ಪತ್ರಕರ್ತರಾದ ಹಿರೇನಲ್ಲೂರು ಶಿವು, ಕೆ.ಎನ್.ಕೃಷ್ಣಮೂರ್ತಿ, ಎಂ.ಎನ್.ಜಗದೀಶ್, ಬಾಲುಮಚ್ಚೇರಿ, ಬಾಲಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News