ಬಿಜೆಪಿ ನಾಯಕರ ವಿರುದ್ಧದ ಕೇಸ್‌ಗಳಿಗೆ ಮರು ಜೀವ?
ಬೆಂಗಳೂರು, ಆ.4: ಕೇಂದ್ರದ ಬಿಜೆಪಿ ಸರಕಾರ ದ್ವೇಷ ರಾಜಕಾರಣಕ್ಕೆ ಇಳಿದಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ಇದೀಗ ರಾಜ್ಯ ಬಿಜೆಪಿಯ ಪ್ರಮುಖ ನಾಯಕರಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳಿಗೆ ಮರುಜೀವ ನೀಡಲು ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪ, ಜಗದೀಶ್ ಶೆಟ್ಟರ್, ಬಿ.ಜೆ. ಪುಟ್ಟಸ್ವಾಮಿ, ಶ್ರೀರಾಮುಲು, ಶಾಸಕರಾದ ಅಶ್ವತ್ಥನಾರಾಯಣ, ಸಂಸದ ಪಿ.ಸಿ. ಮೋಹನ್ ಸೇರಿ ಪ್ರಮುಖ ನಾಯಕರ ಬಗ್ಗೆ ಈಗಾಗಲೇ ಇರುವ ಪ್ರಕರಣಗಳಿಗೆ ಮರುಜೀವ ನೀಡುವುದು. ತನ್ಮೂಲಕ ಬಿಜೆಪಿಯ ಈ ನಾಯಕರು ಸಹ ರೇಜಿಗೆ ಹುಟ್ಟಿಸುವಷ್ಟರ ಮಟ್ಟಿಗೆ ಆಸ್ತಿ ಸಂಗ್ರಹ ಮಾಡಿದ್ದಾರೆ ಎಂಬ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುವ ಬಗ್ಗೆ ಸರಕಾರದಲ್ಲಿ ಗಂಭೀರ ಚಿಂತನೆ ನಡೆದಿದೆ.
ಒಟ್ಟಾರೆ, ಕನಿಷ್ಠ ಮೂವರು ಪ್ರಮುಖ ಬಿಜೆಪಿ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಬಿಜೆಪಿಯಲ್ಲೂ ತಿಮಿಂಗಿಲಗಳು ಭರ್ಜರಿಯಾಗಿಯೇ ಇವೆ ಎಂಬುದನ್ನು ಜನರ ಮುಂದೆ ಅನಾವರಣಗೊಳಿಸುವ ಚಿಂತನೆ ಸರಕಾರಕ್ಕೆ ಇದೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ಆಪ್ತ ಸಿಬ್ಬಂದಿ ಪ್ರಕರಣ, ಜಗದೀಶ್ ಶೆಟ್ಟರ್ ಅವರ ಹುಬ್ಬಳ್ಳಿಯ ಜಮಖಾನ ಮೈದಾನ ಭೂಕಬಳಿಕೆ ಪ್ರಕರಣ, ಶೋಭಾ ಕರಂದ್ಲಾಜೆ ಅವರ ವಿದ್ಯುತ್ ಖರೀದಿ ಹಗರಣ, ಬೆಂಗಳೂರಿನ ಬಿಜೆಪಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಡಾ.ಅಶ್ವತ್ಥನಾರಾಯಣ, ಮುನಿರಾಜು, ಬಿ. ಜೆ.ಪುಟ್ಟಸ್ವಾಮಿ, ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಸಂಸದ ಪಿ.ಸಿ.ಮೋಹನ್ ಮತ್ತಿತರರ ವಿರುದ್ಧ ಭೂಹಗರಣ ಮತ್ತು ಭ್ರಷ್ಟಾಚಾರ ಹಗರಣಗಳ ತನಿಖೆಯನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ಗಂಭೀರ ಪ್ರಯತ್ನ ನಡೆದಿದೆ.
ವಿಶ್ವ ಗಾಣಿಗ ಟ್ರಸ್ಟ್ ಹೆಸರಿನಲ್ಲಿ 40 ಕೋಟಿ ರೂ. ಮೌಲ್ಯದ ಟಿ.ದಾಸನಪುರ ಬಳಿಯ 10 ಎಕರೆ ಗೋಮಾಳ ಜಮೀನು ಖರೀದಿ ಪ್ರಕರಣದಲ್ಲಿ ಪುಟ್ಟಸ್ವಾಮಿ ಮತ್ತು ಅಂದಿನ ಡಿ.ಸಿ. ಅಯ್ಯಪ್ಪವಿರುದ್ಧದ ಪ್ರಕರಣದಲ್ಲಿ ಪುಟ್ಟಸ್ವಾಮಿ ವಿರುದ್ಧ ಶೀಘ್ರ ಕ್ರಮಕ್ಕೆ ಸರಕಾರ ಮುಂದಾಗಲಿದೆ ಎಂದೇ ಹೇಳಲಾಗುತ್ತಿದೆ. ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಯಡಿಯೂರಪ್ಪನಡುವಿನ ಹೈಕಮಾಂಡ್‌ಗೆ ಹಣ ನೀಡಿದ ಸಂಬಂಧ ಆಪ್ತ ಮಾತುಕತೆ ಕುರಿತಂತೆ ಕೆಪಿಸಿಸಿ ಕಾನೂನು ಘಟಕ ನೀಡಿರುವ ದೂರಿನ ಪ್ರಕರಣಗಳನ್ನು ಚುರುಕುಗೊಳಿಸಲು ಸರಕಾರ ಯೋಚಿಸುತ್ತಿದೆ ಎನ್ನಲಾಗುತ್ತಿದೆ.
ಇನ್ನು ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ.ರವಿ ಮತ್ತು ಸಂಸದ ಬಿ.ಶ್ರೀರಾಮುಲು ವಿರುದ್ಧದ ಹಗರಣಗಳು ಮತ್ತು ಶಾಸಕ ಡಿ.ಎನ್.ಜೀವರಾಜ್, ಮಾಜಿ ಸಚಿವ ಎ.ರಾಮದಾಸ್ ಮತ್ತು ಹರತಾಳು ಹಾಲಪ್ಪಅವರ ವಿರುದ್ಧದ ಅತ್ಯಾಚಾರ ಪ್ರಕರಣಗಳ ಕುರಿತಾಗಿಯೂ ಸಮಗ್ರ ಮಾಹಿತಿ ಸಂಗ್ರಹಿಸಿ, ಪ್ರಕರಣಗಳು ಯಾವ ಹಂತದಲ್ಲಿವೆ ಎಂಬುದರ ಕುರಿತು ತಿಳಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಹಾಗೆಯೇ ವಿಧಾನಸೌಧದಲ್ಲಿ 2 ಕೋಟಿ ರೂ. ಜಪ್ತಿ ಮಾಡಿದ ಪ್ರಕರಣದ ಹಿನ್ನೆಲೆಯನ್ನೂ ಮರುತನಿಖೆ ನಡೆಸುವ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.