ಆಲೇಖಾನ್ ಕುಗ್ರಾಮಕ್ಕೆ ಆರೋಗ್ಯ ಸಂಚಾರಿ ವಾಹನ
ಬಣಕಲ್, ಆ.5: ಮೂಲಸೌಕರ್ಯ ವಂಚಿತ ಆಲೇಖಾನ್ ಕುಗ್ರಾಮದಲ್ಲಿ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಗಮನ ಸೆಳೆದಿದ್ದ ವಿದ್ಯಾರ್ಥಿನಿ ಕುಮಾರಿ ನಮನ ಅವರ ಮನವಿ ಪರಿಣಾಮ ಹಂತಹಂತವಾಗಿ ಗ್ರಾಮಕ್ಕೆ ಸೌಲಭ್ಯಗಳು ಲಭಿಸುತ್ತಿದ್ದು, ಶನಿವಾರ ಈ ಕುಗ್ರಾಮಕ್ಕೆ ಆರೋಗ್ಯ ಸಂಚಾರಿ ವಾಹನಕ್ಕೆ ಚಾಲನೆ ನೀಡಲಾಯಿತು.
ವಾಹನದ ವ್ಯವಸ್ಥೆ ಇಲ್ಲದೇ ಸಂಚಾರಿ ಸಮಸ್ಯೆ ಎದುರಿಸುತ್ತಿರುವ ಆಲೇಖಾನ್‍ಗೆ ಈಗ ಗ್ರಾಮೀಣ ಆರೋಗ್ಯ ಅಭಿಯಾನದಡಿ ಆರೋಗ್ಯ ಇಲಾಖೆ ಮೂಡಿಗೆರೆ ಸರ್ಕಾರಿ ಎಂಜಿಎಂ ಆಸ್ಪತ್ರೆಯಿಂದ ಸಂಚಾರಿ ವಾಹನವನ್ನು ವಾರದ ಪ್ರತಿ ಶನಿವಾರ ಸಂಚರಿಸಲು ಶುರು ಮಾಡಿದೆ. ರೋಗಿಗಳನ್ನು ನೇರವಾಗಿ ಭೇಟಿಯಾಗಿ ಶುಶ್ರೂಷೆ ಮಾಡಿಸಿ ಚಿಕಿತ್ಸೆ ಮಾಡಲು ಮುಂದಾಗಿದೆ.
ಸಂಚಾರಿ ವಾಹನದಲ್ಲಿದ್ದ ವೈದ್ಯರಾದ ಡಾ.ರಂಗಸ್ವಾಮಿ ಮಾತನಾಡಿ, ಸರ್ಕಾರಿ ರಜೆ ಹೊರತು ಪಡಿಸಿ ಪ್ರತಿ ಶನಿವಾರವು ಆಲೇಖಾನ್‍ಗೆ ಆರೋಗ್ಯ ಸಿಬ್ಬಂದಿಗಳೊಂದಿಗೆ ಬೇಟಿ ನೀಡಿ ಅಲ್ಲಿಯ ಜನರಿಗೆ ಆರೋಗ್ಯದ ಸೌಲಭ್ಯವನ್ನು ಉಚಿತ ತಪಾಸಣೆ ಹಾಗೂ ಔಷದಿಗಳನ್ನು ನೀಡಲಾಗುವುದು. ಗ್ರಾಮಸ್ಥರು ಇದರ ಸದುಪಯೋಗ ಮಾಡಿಕೊಂಡು ಗ್ರಾಮಸ್ಥರ ಮನೆ ಬಾಗಿಲಿಗೆ ಬಂದಿರುವ ಈ ಆರೋಗ್ಯ ಸೌಲಭ್ಯವನ್ನು ಕಡೆಗಣಿಸದೇ ಪ್ರಯೋಜನ ಪಡೆಯಬೇಕು ಎಂದರು.
ಗ್ರಾಮದ ಮುಖಂಡ ವೀರಪ್ಪಗೌಡ ಮಾತನಾಡಿ, ಆಲೇಖಾನ್‍ನಿಂದ ರೋಗಿಗಳಿಗೆ ಆಸ್ಪತ್ರೆಗೆ ಸಾಗಲು ತುಂಬಾ ಅನಾನುಕೂಲವಿತ್ತು. ಸರ್ಕಾರದ ಇಂತಹ ಸಂಚಾರಿ ವಾಹನದ ಯೋಜನೆಯಿಂದ ಗ್ರಾಮದಲ್ಲಿ ಅನಾರೋಗ್ಯದಿಂದ ಇದ್ದವರಿಗೆ ತುರ್ತು ಚಿಕಿತ್ಸೆ ನೀಡಲು ಸಹಾಯಕವಾಗಿದೆ. ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಜನಪರ ಸೌಲಭ್ಯ ನೀಡಿರುವುದು ಗ್ರಾಮದ ಏಳಿಗಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಆರೋಗ್ಯ ಸಹಾಯಕಿ ಮಂಜುಳ, ಡಾ.ರಂಗಸ್ವಾಮಿ, ಶುಶ್ರೂಷಕಿಯರಾದ ದೀಪಿಕಾ, ಕಾವ್ಯ, ಪ್ರಯೋಗ ಶಾಲಾ ತಂತ್ರಜ್ಞ ಅಜಿತ್, ಫಾರ್ಮಸಿಸ್ಟ್ ಮಹಮ್ಮದ್, ಕಿರಿಯ ಮಹಿಳಾ ಸಹಾಯಕಿ ಮಂಜುಳ, ಆಶಾ ಕಾರ್ಯಕರ್ತೆ ಪವಿತ್ರ, ಜಾವಳಿ ಅಂಗನವಾಡಿ ಕಾರ್ಯಕರ್ತೆ ಶ್ವೇತಾ, ಜಾವಳಿ ಗ್ರಾಪಂ ಸದಸ್ಯೆ ಶಾಂತಮ್ಮ, ಶಾಶ್ವತ್ ಪಟೇಲ್, ಚಂದ್ರಣ್ಣ, ಚಾಲಕ ರವೀಂದ್ರ, ಬಾಳೂರು ಪೋಲಿಸ್ ಸಿಬ್ಬಂದಿ ಮಹಾಂತೇಶ್ ಉಪಸ್ಥಿತರಿದ್ದರು.