ರಾಹುಲ್ ಗಾಂಧಿ ಕಾರಿಗೆ ಕಲ್ಲು : ಬಿಜೆಪಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ಗುಂಡ್ಲುಪೇಟೆ,ಆ.5: ಗುಜರಾತ್‍ನಲ್ಲಿ ರಾಹುಲ್ ಗಾಂಧಿ ಕಾರಿಗೆ ಕಲ್ಲೆಸೆದ ಬಿಜೆಪಿ ಕಾರ್ಯಕರ್ತರ ವಿರುದ್ದ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಪ್ರವಾಸಿ ಮಂದಿರ, ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದವರೆಗೆ ಸಾಗಿದ ಕಾರ್ಯಕರ್ತರು ಬಿಜೆಪಿ ವಿರುದ್ದ ಘೋಷಣೆ ಕೂಗಿದರು. ಬಿಜೆಪಿ ಸರ್ಕಾರವು ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ವಾಮಮಾರ್ಗದಿಂದ ಪ್ರಯತ್ನ ನಡೆಸಿದೆ. ವಿನಾಕಾರಣ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಆದಾಯತೆರಿಗೆ ದಾಳಿ ನಡೆಸಿದೆ. ನೆರೆ ಸಂತ್ರಸ್ತರನ್ನು ಭೇಟಿ ಮಾಡಲು ಗುಜರಾತಿಗೆ ತೆರಳಿದ್ದ ರಾಹುಲ್ ಗಾಂಧಿಯವರ ಕಾರಿಗೆ ಕಲ್ಲೆಸೆಯುವ ಮೂಲಕ ಬಿಜೆಪಿ ಕಾರ್ಯಕರ್ತರು ತಮ್ಮ ಹತಾಶೆ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ ತಾಪಂ ಅಧ್ಯಕ್ಷ ಎಚ್.ಎನ್.ನಟೇಶ್, ಸದಸ್ಯ ಎಸ್.ಎಸ್.ಮಧುಶಂಕರ್, ಜಿಪಂ ಸದಸ್ಯರಾದ ಕೆ.ಎಸ್.ಮಹೇಶ್, ಮುಖಂಡ ಎಚ್.ಎಂ.ಗಣೇಶ್‍ಪ್ರಸಾದ್, ಪುರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಹಾಜರಿದ್ದರು.