ಚಾಮರಾಜನಗರ : ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ
ಚಾಮರಾಜನಗರ, ಆ. 5:ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬ್ಯಾನರ್‍ಗಳನ್ನು ಅಳವಡಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ನಗರಸಭೆ ವತಿಯಿಂದ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ರಾಜಕೀಯ ಕಾರ್ಯಕ್ರಮ, ಹಬ್ಬ, ಜಾತ್ರೆ, ಸಮಾರಂಭ, ಸಂಘಸಂಸ್ಥೆ ಕಾರ್ಯಕ್ರಮಗಳು, ಪ್ರಮುಖರ ಆಗಮನ, ಹುಟ್ಟುಹಬ್ಬದ ಶುಭಕೋರುವ ಸಲುವಾಗಿ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್‍ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದು ಕಳೆದ 2015ರ ಮೇ 7ರಂದು ಮತ್ತು 2017ರ ಜುಲೈ 10ರಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪಟ್ಟಣ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್‍ಗಳನ್ನು ಅಳವಡಿಸಬಾರದೆಂದು ಕಟ್ಟುನಿಟ್ಟಾಗಿ ಆದೇಶಿಸಿದೆ. ಅವಶ್ಯಕವಾಗಿ ಅಳವಡಿಸಲೇಬೇಕಿದ್ದಲ್ಲಿ ಖಾಸಗಿ ಕಟ್ಟಡ ಮಾಲೀಕರಿಂದ ಅನುಮತಿ ಪಡೆದು ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದು ನಗರಸಭೆಗೆ ಸಲ್ಲಿಸಿದ ನಂತರ ನಿಯಮಾನುಸಾರ ಅನುಮತಿ ನೀಡಲು ಕ್ರಮ ವಹಿಸಲಾಗುವುದು. ಅನುಮತಿ ಪಡೆಯದೇ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸುವುದು ಕಂಡುಬಂದರೆ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರಾದ ರಾಜಣ್ಣ ತಿಳಿಸಿದ್ದಾರೆ.