ಮಡಿಕೇರಿ : ಮತ್ತೆ ಮುಂಗಾರು ಜೋರು : ಕೃಷಿ ಚಟುವಟಿಕೆ ಚುರುಕು
ಮಡಿಕೇರಿ, ಆ.5 :ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿ, ತೊರೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ.
ಜಿಲ್ಲೆಯಲ್ಲಿ ಪ್ರಮುಖ ಕೃಷಿ ಬೆಳೆಗಳಾದ ಭತ್ತ, ಮುಸುಕಿನ ಜೋಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಜಿಲ್ಲೆಯಲ್ಲಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ಈಗಾಲೇ 8,650 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯವಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ 6,500 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 1,300 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯವಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದ್ದು, ಈಗಾಗಲೇ 4,228 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯವಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 7,600 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 3,130 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಪೂರ್ಣಗೊಂಡಿದೆ. ಹಾಗೆಯೇ 2400 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಭತ್ತ ಬೆಳೆಯಲಾಗುತ್ತಿದ್ದು, ಕಾಲುವೆಗೆ ನೀರು ಹರಿಸಿದ ತಕ್ಷಣ ನೀರಾವರಿ ಭತ್ತ ಚಟುವಟಿಕೆ ಆರಂಭವಾಗಲಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೆ ಶೇ.28ರಷ್ಟು ಭತ್ತ ನಾಟಿ ಕಾರ್ಯವಾಗಿದೆ.
ಪ್ರಸಕ್ತ ವರ್ಷದಲ್ಲಿ ನಾಟಿಯಂತ್ರ ಬಳಸಿ ಭತ್ತ ನಾಟಿ ಮಾಡುವುದಕ್ಕೆ ಕೃಷಿ ಇಲಾಖೆಯಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ. ಪ್ರತೀ ಹೆಕ್ಟೇರ್ ಪ್ರದೇಶಕ್ಕೆ (ಒಬ್ಬ ಕೃಷಿಕರಿಗೆ 2 ಹೆಕ್ಟೇರ್ ಮೀರದಂತೆ) 4 ಸಾವಿರ ರೂ. ಸಹಾಯಧನ ಕಲ್ಪಿಸಲಾಗುತ್ತದೆ.
ಮುಸುಕಿನ ಜೋಳ ಸಂಬಂಧಿಸಿದಂತೆ 4 ಸಾವಿರ ಹೆಕ್ಟೇರ್ ಗುರಿಯಲ್ಲಿ 3,590 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯವಾಗಿದ್ದು, ಶೇ.90ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಇಲಾಖೆ ವತಿಯಿಂದ ಸಹಾಯಧನದಡಿ ವಿವಿಧ ಯಂತ್ರೋಪಕರಣ ನೀಡುವ ಸೌಲಭ್ಯವಿದ್ದು, ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್, ನಾಟಿಯಂತ್ರ, ಕಟಾವು ಯಂತ್ರ, ನೀರು ಹಾಯಿಸಲು ಡೀಸೆಲ್ ಪಂಪುಸೆಟ್, ತುಂತುರು ನೀರಾವರಿ ಘಟಕಗಳು, ಪವರ್ ಪ್ಲೇಯರ್ಸ್‍ಗಳನ್ನು ರಿಯಾಯಿತಿ ದರದಲ್ಲಿ ನೀಡುವ ಸೌಲಭ್ಯವಿದೆ.
ಲಘು ಪೋಷಕಾಂಶ, ಎರೆಹುಳು ಗೊಬ್ಬರ ಕಾರ್ಯಕ್ಕಾಗಿ ತೊಟ್ಟಿ ನಿರ್ಮಾಣ, ಹಸಿರೆಲೆ ಗೊಬ್ಬರ, ಡೋಲಾಮೈಟ್ ನ್ನು ಸಹಾಯಧನದಡಿ ಕೃಷಿ ಇಲಾಖೆಯಿಂದ ನೀಡಲಾಗುತ್ತದೆ.
ಕೃಷಿ ಹೊಂಡ ಕಾರ್ಯಕ್ಕೂ ಸಹ ಅವಕಾಶವಿದೆ. ರೈತರು ತಮ್ಮ ಹೊಲದ ಮಣ್ಣಿನ ರಸಸಾರ ಹೆಚ್ಚಿಸಲು ಮುಂದಾಗಬೇಕಿದೆ. ಆ ದಿಸೆಯಲ್ಲಿ ಮಣ್ಣನ್ನು ಉಚಿತವಾಗಿ ಪರೀಕ್ಷೆ ಮಾಡಿ ಮಾಹಿತಿ ನೀಡಲಾಗುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಮಾಹಿತಿ ಪಡೆಯಬಹುದಾಗಿದೆ ಎಂದು ಕೃಷಿ ತಾಂತ್ರಿಕ ಅಧಿಕಾರಿ ರಮೇಶ್ ಅವರು ಮಾಹಿತಿ ನೀಡಿದ್ದಾರೆ.
ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿಗಾಗಿ ಅರ್ಜಿ ಅಹ್ವಾನ:
ಪ್ರತೀ ವರ್ಷದಂತೆ 2017-18ನೇ ಸಾಲಿನಲ್ಲಿಯು ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಹ ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ. ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 10 ಹಾಗೂ ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆ ದಿನವಾಗಿದೆ.
ಕೃಷಿ ಪಂಡಿತ ಪ್ರಶಸ್ತಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಪ್ರವೇಶ ಶುಲ್ಕ ಸಾಮಾನ್ಯ ರೈತರಿಗೆ 100 ರೂ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ 25 ರೂ ಪಾವತಿಸಬೇಕಿದೆ.
ಈ ಹಿಂದೆ ಕೃಷಿ ಪ್ರಶಸ್ತಿ ಪಡೆಯದ ರೈತರು ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಭರ್ತಿಮಾಡಿದ ಅರ್ಜಿಯನ್ನು ಪಹಣಿ ಪತ್ರದೊಂದಿಗೆ ನಿಗದಿತ ದಿನಾಂಕದೊಳಗೆ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿsಸುವಂತೆ ಜಂಟಿ ಕೃಷಿ ನಿರ್ದೇಶಕರಾದ ಕೆ.ರಾಮಪ್ಪ ಅವರು ಕೋರಿದ್ದಾರೆ.
ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿಗೆ 15 ಸಾವಿರ(ಪ್ರಥಮ), 10 ಸಾವಿರ (ದ್ವ್ವಿತೀಯ) ಮತ್ತು 5 ಸಾವಿರ (ತೃತೀಯ), ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿಗೆ ಸಂಬಂಧಿಸಿದಂತೆ ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ಒಳಗೊಂಡಿದೆ. ರಾಜ್ಯ ಕೃಷಿ ಪ್ರಶಸ್ತಿ ಸಂಬಂಧಿಸಿದಂತೆ 50 ಸಾವಿರ ರೂ.(ಪ್ರಥಮ), 25 ಸಾವಿರ ರೂ.(ದ್ವಿತೀಯ), 15 ಸಾವಿರ ರೂ.(ತೃತೀಯ). ಒಂದು ಬಾರಿ ಬಹುಮಾನ ಪಡೆದವರು ಮೂರು ವರ್ಷದವರೆಗೆ ಅದೇ ವಿಭಾಗವಾರು ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತಿಲ್ಲ.
ಕೃಷಿ ಪಂಡಿತ ಪ್ರಶಸ್ತಿಗೆ ಸಂಬಂಧಿಸಿದಂತೆ ಪ್ರಥಮ ಬಹುಮಾನ ಒಂದು ಲಕ್ಷ ರೂ., ದ್ವಿತೀಯ ಬಹುಮಾನ 75 ಸಾವಿರ ರೂ., ತೃತೀಯ ಬಹುಮಾನ 50 ಸಾವಿರ ರೂ. ನೀಡಲಾಗುತ್ತದೆ. ಮೊದಲ ಮೂರು ಪ್ರಶಸ್ತಿ ಪಡೆದ ನಂತರ ಶೇ.65 ಕ್ಕೂ ಹೆಚ್ಚು ಅಂಕ ಪಡೆದವರಿಗೆ ಉದಯೋನ್ಮುಖ ಪ್ರಶಸ್ತಿ ನೀಡಲಾಗುತ್ತಿದ್ದು, ಇದಕ್ಕೆ 25 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.