ಸೊಳ್ಳೆ ಪರದೆ ಧರಿಸಿ ವಿನೂತನ ಪ್ರತಿಭಟನೆ
ಮಂಡ್ಯ, ಆ.5: ಜಿಲ್ಲೆಯಲ್ಲಿ ಡೆಂಗ್, ಚಿಕುನ್ ಗುನ್ಯ ನಿಯಂತ್ರಣಕ್ಕೆ ಆಗ್ರಹಿಸಿ ಜೆಡಿಯು ಜಿಲ್ಲಾಧ್ಯಕ್ಷ ಬಿ.ಎಸ್.ಗೌಡ ಶನಿವಾರ ಸೊಳ್ಳೆಪರದೆ ಧರಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯತ್ ಕಚೇರಿ ಆವರಣಕ್ಕೆ ಏಕಾಂಗಿಯಾಗಿ ಬಂದ ಗೌಡ, ಜತೆಯಲ್ಲಿ ತಂದಿದ್ದ ಸೊಳ್ಳೆ ಪರದೆಯನ್ನು ಧರಿಸಿಕೊಂಡು ಸರಕಾರ, ಜಿಲ್ಲಾಡಳಿತ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಜಿಲ್ಲೆಯಲ್ಲಿ ಡೆಂಗ್, ಚಿಕುನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಉಲ್ಬಣಿಸುತ್ತಿದ್ದರೂ ಸಂಬಂಧಿಸಿದವರು ರೋಗ ನಿಯಂತ್ರಣಕ್ಕೆ ಕ್ರಮವಹಿಸಿಲ್ಲ ಎಂದು ಅವರು ಆರೋಪಿಸಿದರು.
ಆಸ್ಪತ್ರೆಗಳ ವರದಿ ಪ್ರಕಾರ ಜಿಲ್ಲೆಯಲ್ಲಿ ಇದುವರೆಗೆ ಸುಮಾರು 30 ಮಂದಿ ರೋಗಗಳಿಗೆ ಬಲಿಯಾಗಿದ್ದು, ನೂರಾರು ಜನ ಬಳಲುತ್ತಿದ್ದಾರೆ. ಆದರೂ ಸೊಳ್ಳೆ ನಿಯಂತ್ರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ನಾಲ್ಕು ಬಜೆಟ್‍ಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಸುಮಾರು 27 ಕೋಟಿ ರೂ. ಮೀಸಲಿಟ್ಟಿದ್ದು, ಇದರಲ್ಲಿ ಕೇವಲ 5 ಕೋಟಿ ರೂ. ಬಳಸಿಕೊಳ್ಳಲಾಗಿದೆ. ಅನುದಾನವಿದ್ದರೂ ಸರಿಯಾಗಿ ಬಳಕೆಯಾಗಿಲ್ಲ ಎಂದು ಅವರು ಕಿಡಿಕಾರಿದರು.
ಚಿಕುನ್ ಗುನ್ಯಾ, ಡೆಂಗ್ ಬಗ್ಗೆ ಅರಿವು ಮೂಡಿಸಲು ವಾರ್ಡ್ ಮತ್ತು ಪಂಚಾಯತ್‍ಮಟ್ಟದಲ್ಲಿ ಸಂಪರ್ಕ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ ಎಂದವರು ವಿಷಾದಿಸಿದರು.
ರೋಗಕ್ಕೆ ತುತ್ತಾದ ಬಡವರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ದುಬಾರಿ ಹಣ ನೀಡಿ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. ಸರಕಾರ ಕೂಡಲೇ ಆಸ್ಪತ್ರೆಗಳಲ್ಲಿ ರಿಯಾಯಿತಿ ದರದಲ್ಲಿ ಮಾತ್ರೆ, ಔಷಧಿ ವಿತರಿಸಲು ಸೂಚಿಸಬೇಕು. ಸೊಳ್ಳೆಗಳ ನಿಯಂತ್ರಕ್ಕೆ ಪರಿಣಾಮಕಾರಿ ಕ್ರಮಕೈಗೊಳ್ಳಬೇಕು ಎಂದು ಗೌಡ ಒತ್ತಾಯಿಸಿದರು.