×
Ad

ಆ.16ಕ್ಕೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ

Update: 2017-08-05 21:54 IST

ಬೆಂಗಳೂರು, ಜು. 5: ಬಿಬಿಎಂಪಿಯ 125 ವಾರ್ಡ್‌ಗಳಲ್ಲಿ ಆ.16ರಂದು ಇಂದಿರಾ ಕ್ಯಾಂಟೀನ್ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ನಗರ ಪ್ರದಕ್ಷಿಣಿ ನಡೆಸಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇಂದಿರಾ ಕ್ಯಾಂಟೀನ್ ಅನ್ನು ಆ.15ರಂದು ಉದ್ಘಾಟಿಸಲು ನಿರ್ಧರಿಸಲಾಗಿತ್ತು. ಅಂದು ಸ್ವಾತಂತ್ರ ದಿನಾಚರಣೆ ಇರುವುದರಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆಯನ್ನು ಆ.16ಕ್ಕೆ ಮುಂದೂಡಲಾಗಿದೆ ಎಂದರು.

 ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದು, ಭಾಗವಹಿಸುವ ನಿರೀಕ್ಷೆ ಇದೆ. ಉಳಿದ ವಾರ್ಡ್‌ಗಳಲ್ಲಿ ಅ.2ರಂದು ಇಂದಿರಾ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಲಾಗುವುದು. ಪ್ರತಿ ದಿನ ಮೂರು ಲಕ್ಷ ಮಂದಿಗೆ 10 ರೂ.ಗೆ ಊಟ, ತಿಂಡಿ ನೀಡಲಾಗುವುದು ಎಂದು ತಿಳಿಸಿದರು.

ಪಾಲಿಕೆ ಆಸ್ತಿಯಲ್ಲೆ ಕ್ಯಾಂಟೀನ್ ನಿರ್ಮಾಣ: ಘೋಷಿತ ಉದ್ಯಾನವನ ಮತ್ತು ಆಟದ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿಲ್ಲ. ನಿರ್ಮಿಸುವುದೂ ಇಲ್ಲ. ಆದರೆ ಕ್ಯಾಂಟೀನ್ ವಿಚಾರದಲ್ಲಿ ಜನ ವಿರೋಧಿಗಳು ತಗಾದೆ ತೆಗೆಯುತ್ತಿದ್ದಾರೆ. ಬಡವರ ಕೆಲಸ ನಮಗೆ ಮುಖ್ಯ. ಹಸಿದವರಿಗೆ ಊಟ ನೀಡುವುದು ನಮ್ಮ ಆದ್ಯತೆ. ಕೆಲವರು ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವುದನ್ನು ಸಹಿಸದವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News