ಹೈಕಮಾಂಡ್‌ನಿಂದ ಯಾವ ಸೂಚನೆಯೂ ಬಂದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು,ಆ.5: ಐಟಿ ದಾಳಿ ವಿಚಾರದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸಮರ್ಥನೆ ಮಾಡಿಕೊಳ್ಳಬೇಡಿ ಎಂದು ಹೈಕಮಾಂಡ್‌ನಿಂದ ನಮಗೆ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದಿದೆ ಎನ್ನುವುದು ಆಧಾರರಹಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಹೈಕಮಾಂಡ್ ಈ ರೀತಿ ಸೂಚನೆ ನೀಡಲು ಸಾಧ್ಯವಿಲ್ಲ. ನಮಗೆ ಯಾವುದೇ ಸೂಚನೆಯೂ ಬಂದಿಲ್ಲ. ರಾಜಕೀಯ ಪ್ರೇರಿತವಾದ ಐಟಿ ದಾಳಿಯನ್ನು ಯಾರ ಮನೆ ಮೇಲಾದರೂ ಮಾಡಬಹುದು. ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ಮಾಡುವಾಗ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಕರೆತಂದಿದ್ದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ಇದ್ದರೆ ಐಟಿ ಅಧಿಕಾರಿಗಳು ಯಾವ ಸಚಿವರ ಮನೆಯ ಮೇಲಾದರೂ ದಾಳಿ ಮಾಡಲಿ. ಬಿಜೆಪಿಯಲ್ಲಿ ಭ್ರಷ್ಟರು ಇಲ್ಲವೆ. ಅವರ ಮೇಲೆ ಯಾಕೆ ಐಟಿ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರಾದ ಯಡಿಯೂರಪ್ಪ, ಅನಂತಕುಮಾರ್ ಮತ್ತು ಸದಾನಂದಗೌಡರ ಮನೆಯ ಮೇಲೂ ದಾಳಿ ನಡೆಸಲಿ. ಈಶ್ವರಪ್ಪತಮ್ಮ ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿರಲಿಲ್ಲವೆ. ಅವರ ಮೇಲೂ ದಾಳಿಯಾಗಲಿ. ರಾಜಕೀಯ ಪ್ರೇರಿತ ದಾಳಿಗಳನ್ನು ಎದುರಿಸಲು ನಾವು ಸಿದ್ಧ ಎಂದು ಸವಾಲು ಹಾಕಿದರು.
ಖಂಡನೆ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿರುವುದು ಪ್ರಜಾಪ್ರಭುತ್ವದ ವಿರೋಧಿ ನಡೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
ರಾಹುಲ್‌ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು. ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ಆಯಾ ಸರಕಾರಗಳ ಕರ್ತವ್ಯ. ರಾಹುಲ್‌ಗಾಂಧಿ ಅವರು ಗುಜರಾತ್‌ಗೆ ಭೇಟಿ ನೀಡಿದ್ದು, ಅಲ್ಲಿನ ಪ್ರವಾಹ ಪೀಡಿತರಿಗೆ ಸಾಂತ್ವನ ಹೇಳಲು ಅವಕಾಶ ನೀಡುವುದಿಲ್ಲ ಎಂದರೆ ಏನು ಅರ್ಥ. ದೇಶದಲ್ಲಿ ಪ್ರಧಾನಿ ಮೋದಿ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇಂತಹ ಘಟನೆಗಳು ಮರು ಕಳುಹಿಸಿದರೆ ದೇಶವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಅವಧಿ ಪೂರ್ಣ:ಮುಖ್ಯಮಂತ್ರಿಯ ಸಂಪೂರ್ಣ ಅವಧಿಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ. ರಾಜ್ಯ ವಿಧಾನಸಭೆಗೆ ನಿಗದಿತ ಅವಧಿಯಲ್ಲೇ ಚುನಾವಣೆ ನಡೆಯಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ವಿಷಯದಲ್ಲಿ ಪ್ರತಿಪಕ್ಷಗಳು ಗುಲ್ಲು ಎಬ್ಬಿಸುತ್ತಿದ್ದಾರೆ ಎಂದು ಹೇಳಿದರು.