ಪದವಿ ಪೂರ್ವ ಕಾಲೇಜುಗಳಲ್ಲಿ ವಿಶೇಷ ಇಂಗ್ಲಿಷ್ ತರಗತಿ
ಬೆಂಗಳೂರು, ಆ.5: ಪದವಿ ಪೂರ್ವ ಶಿಕ್ಷಣದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ವಿಷಯದಲ್ಲಿ ವ್ಯಾಕರಣ ಹಾಗೂ ಮಾತನಾಡುವ ಕೌಶಲವನ್ನು ಉತ್ತಮಗೊಳಿಸುವ ನಿಟ್ಟನಲ್ಲಿ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
2017-18ನೆ ಶೈಕ್ಷಣಿಕ ಸಾಲಿಗೆ ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರವಿವಾರದ ರಜಾ ದಿನಗಳಲ್ಲಿ(ಆಗಸ್ಟ್ 2017ರಿಂದ ಜನವರಿ 2018ರವರೆಗೆ)ಇಂಗ್ಲಿಷ್ ಭಾಷಾ ವಿಷಯದಲ್ಲಿ ವ್ಯಾಕರಣ ಹಾಗೂ ಮಾತನಾಡುವ ಕೌಶಲ್ಯ ಸಾಮರ್ಥ್ಯ ಹೆಚ್ಚಿಸುವ ದೃಷ್ಟಿಯಿಂದ ಸದರಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರ ಸ್ಥಳದಲ್ಲಿ ಒಂದು ನೋಡಲ್ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು. ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಆ ತಾಲೂಕಿನಲ್ಲಿರುವ ಎಲ್ಲ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಆಧ್ಯಯನ ಮಾಡುತ್ತಿರುವ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ವಿಶೇಷ ತರಗತಿಗೆ ಹಾಜರಿರುತ್ತಾರೆ.
ಪ್ರತಿ ತರಬೇತಿ ಕೇಂದ್ರಕ್ಕೂ ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಜ್ಞಾನವುಳ್ಳ ಹಾಗೂ ಸ್ನಾತಕೋತ್ತರ ಪದವಿ ಪಡೆದ ಉಪನ್ಯಾಸಕರು, ನಿವೃತ್ತ ಉಪನ್ಯಾಸಕರು ಹಾಗೂ ಖಾಸಗಿ ವಿಷಯತಜ್ಞರುಗಳ ಸಹಕಾರ ಪಡೆಯಲಾಗುತ್ತದೆ. ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಯೋಜಕರಿಗೆ ಹಾಗೂ ಉಪನ್ಯಾಸಕರಿಗೆ ಹಾಗೂ ವಿಷಯ ತಜ್ಞರಿಗೆ ಸೂಕ್ತ ಸಂಭಾವನೆ ನೀಡಲಾಗುತ್ತದೆ.
ತಾಲೂಕು ಸಂಯೋಜಕರ ಜವಾಬ್ದಾರಿ ಬಹಳ ಮಹತ್ವದ್ದಾಗಿದ್ದು, ಸದರಿ ವಿಶೇಷ ತರಬೇತಿ ಕಾರ್ಯಕ್ರಮದ ಯಶಸ್ಸಿನ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಸದರಿ ತರಬೇತಿ ಕಾರ್ಯಕ್ರಮ ಕುರಿತು ಈಗಾಗಲೇ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಹಾಗೂ ಈ ತರಬೇತಿಯಲ್ಲಿ ಭಾಗವಹಿಸುವ ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ್ಕಾಗಿ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.