ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಸೇರ್ಪಡೆ: ಝಮೀರ್ ಅಹ್ಮದ್
ಬೆಂಗಳೂರು, ಆ.5: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ಗಾಂಧಿ ಸಮ್ಮುಖದಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಜೆಡಿಎಸ್ ಬಂಡಾಯ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಶನಿವಾರ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾಂತ್ರಿಕ ಕಾರಣಗಳಿಂದಾಗಿ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಸಾಧ್ಯವಿಲ್ಲ. ಆದುದರಿಂದ, ಡಿಸೆಂಬರ್ ಮೊದಲ ವಾರದಲ್ಲಿ ನಗರದ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ಆಯೋಜಿಸಿ, ಲಕ್ಷಾಂತರ ಜನರ ಸಮ್ಮುಖದಲ್ಲಿ 7 ಜನ ಶಾಸಕರು ಕಾಂಗ್ರೆಸ್‌ಗೆ ಸೇರುತ್ತೇವೆ ಎಂದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಜಾತ್ಯತೀತ ನಾಯಕ. ಆದರೆ, ಎಚ್.ಡಿ.ಕುಮಾರಸ್ವಾಮಿ ಅಧಿಕಾರಕ್ಕಾಗಿ ಕೋಮುವಾದಿಗಳ ಜೊತೆ ಕೈ ಜೋಡಿಸಲು ಹಿಂದೇಟು ಹಾಕುವುದಿಲ್ಲ ಎಂಬುದು, ಇತ್ತೀಚೆಗೆ ವಿಧಾನಪರಿಷತ್ತಿನ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ವೇಳೆಯೆ ಸಾಬೀತಾಗಿದೆ ಎಂದು ಅವರು ಹೇಳಿದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದಲೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ಜೊತೆಗೆ ಇನ್ನುಳಿದ ಬಂಡಾಯ ಶಾಸಕರಿಗೂ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ಟಿಕೆಟ್ ನೀಡುವುದಾಗಿ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಭರವಸೆ ನೀಡಿದ್ದಾರೆ ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.
ಚಾಮರಾಜಪೇಟೆಯಲ್ಲಿ ಜೆಡಿಎಸ್ ಪಕ್ಷ ಸ್ವಂತ ಬಲವನ್ನು ಹೊಂದಿಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ನಾನು 35 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಆದರೆ, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ನನ್ನನ್ನು ದೂರ ಇರಿಸಿತ್ತು. ಆಗ ಜೆಡಿಎಸ್ ಅಭ್ಯರ್ಥಿ ನಂದಿನಿ ಆಳ್ವಗೆ ಬಂದ ಮತಗಳು ಕೇವಲ 540 ಮಾತ್ರ. ಅದೇ 9 ತಿಂಗಳ ನಂತರ ನನ್ನ ನೇತೃತ್ವದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು 57 ಸಾವಿರ ಮತಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.
ಜೆಡಿಎಸ್ ಒಂದು ರೀತಿ ರಾಜಕೀಯ ನಾಯಕರನ್ನು ಸಿದ್ಧಪಡಿಸುವ ತರಬೇತಿ ಸಂಸ್ಥೆಯಂತೆ ಎಂದು ನಾನೇ ಹಲವಾರು ಬಾರಿ ಹೇಳಿಕೆಗಳನ್ನು ನೀಡಿದ್ದೇನೆ. ಆದರೆ, ಜೆಡಿಎಸ್‌ನಿಂದ ಸಿ.ಎಂ.ಇಬ್ರಾಹೀಂ, ರೋಷನ್‌ಬೇಗ್, ಖಮರುಲ್ ಇಸ್ಲಾಮ್, ಇಕ್ಬಾಲ್ ಅನ್ಸಾರಿ, ಅಬ್ದುಲ್ ಅಝೀಮ್ ಸೇರಿದಂತೆ ಹಲವಾರು ಮುಸ್ಲಿಮ್ ಮುಖಂಡರು ಯಾವ ಕಾರಣಕ್ಕಾಗಿ ಜೆಡಿಎಸ್ ತೊರೆದರು ಎಂಬುದು ಈಗ ನನಗೆ ಗೊತ್ತಾಗುತ್ತಿದೆ ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.
ಜೆಡಿಎಸ್ ಪಕ್ಷಕ್ಕಾಗಿ ದುಡಿದ ದಾನೀಶ್ ಅಲಿ, ಝಫರುಲ್ಲಾಖಾನ್, ಶಕೀಲ್ ನವಾಝ್ ಸೇರಿದಂತೆ ಹಲವಾರು ಮುಸ್ಲಿಮ್ ಮುಖಂಡರು ನಮ್ಮಲ್ಲಿರುವಾಗ ಕಾಂಗ್ರೆಸ್ ಪಕ್ಷದ ಜೊತೆ ಸಂಬಂಧವಿರುವ ಬಿ.ಎಂ.ಫಾರೂಕ್‌ರನ್ನು ರಾಜ್ಯಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದನ್ನೆ ನೆಪವಾಗಿಟ್ಟುಕೊಂಡು ನಮ್ಮನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಅವರು ಕಿಡಿಗಾರಿದರು.
ಡಿಕೆಶಿ ವಿರುದ್ಧ ರಾಜಕೀಯ ದಾಳಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಯು ರಾಜಕೀಯ ಪ್ರೇರಿತವಾದದ್ದು. ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್‌ಪಟೇಲ್‌ರನ್ನು ಸೋಲಿಸಲು ನರೇಂದ್ರಮೋದಿ ಹಾಗೂ ಅಮಿತ್‌ಶಾ ಈ ಕೆಲಸ ಮಾಡಿಸಿದ್ದಾರೆ ಎಂದು ಅವರು ದೂರಿದರು.
ಇಮಾಮ್-ಮೌಝನ್‌ಗಳ ಹಜ್‌ಯಾತ್ರೆ
ಕಳೆದ 20 ವರ್ಷಗಳಿಂದ ಕನಿಷ್ಠ 25-30 ಮಂದಿ ಬಡ ಇಮಾಮ್, ಮೌಝನ್‌ಗಳನ್ನು ನನ್ನ ಸ್ವಂತ ಖರ್ಚಿನಲ್ಲಿ ಪವಿತ್ರ ಹಜ್‌ಯಾತ್ರೆಗೆ ಕಳುಹಿಸುತ್ತಿದ್ದೇನೆ. ಆ.19ರಂದು ಸಂಜೆ 5 ಗಂಟೆಗೆ ನಗರದ ಪುರಭವನದಲ್ಲಿ 21ನೆ ವರ್ಷದ ಆಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.
-ಝಮೀರ್‌ಅಹ್ಮದ್‌ಖಾನ್, ಶಾಸಕ