ದೇಶದ ಅಭಿವೃದ್ಧಿ ಕುಸಿಯಲು ಭ್ರಷ್ಟಾಚಾರ ಕಾರಣ: ನ್ಯಾ.ಸಂತೋಷ್ ಹೆಗ್ಡೆ
ಬೆಂಗಳೂರು, ಆ.5: ಭ್ರಷ್ಟಾಚಾರಕ್ಕೆ ಕಡಿವಾಣ ಬೀಳದ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ಕುಗ್ಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಆಯೋಜಿಸಿದ್ದ ‘ಆಡಳಿತ ಸುಧಾರಿಸಿ, ದೇಶ ಉಳಿಸಿ’ ಎಂಬ ಕುರಿತ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೋಪೋರ್ಸ್ ಹಗರಣ, 2ಜಿ ಹಗರಣ, ಕಾಮನ್‌ವೆಲ್ತ್, ಕಲ್ಲಿದ್ದಲು ಇತ್ಯಾದಿ ಅನೇಕ ಹಗರಣಗಳ ಮೂಲಕ ದೇಶವನ್ನು ಲೂಟಿ ಮಾಡಲಾಗಿದೆ. ಇವುಗಳಿಂದಾಗಿಯೇ ದೇಶದ ಆರ್ಥಿಕ ಅಭಿವೃದ್ಧಿ ಕುಂಠಿತವಾಗಿದೆ. ಸದೃಢ ಸಮಾಜ ನಿರ್ಮಾಣಕ್ಕೆ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಅತ್ಯಂತ ಅವಶ್ಯ. ಸಾರ್ವಜನಿಕರಿಗಾಗಿ ರೂಪಿಸಲಾಗುವ ಅನೇಕ ಯೋಜನೆಗಳು ಲಾನುಭವಿಗಳಿಗೆ ತಲುಪುತ್ತಿಲ್ಲ. ಇಂತಹ ಲೂಟಿಗಳನ್ನು ಮೊದಲು ಸರಿಪಡಿಸಬೇಕು ಎಂದರು. ಬಜೆಟ್‌ನಲ್ಲಿ ಘೋಷಣೆ ಮಾಡುವ ವಿವಿಧ ಯೋಜನೆಗಳಿಗೆ ಸರಕಾರ ಸಾವಿರಾರು ಕೋಟಿ ರೂ. ಅನುದಾನ ನೀಡುತ್ತಿದೆ.
ಆದರೆ ಇವುಗಳಲ್ಲಿ ಅರ್ಹರಿಗೆ ಸಿಗುತ್ತಿರುವುದು ಶೇ.20 ಮಾತ್ರ. ಇನ್ನುಳಿದ ಶೇ.80 ಭಾಗ ಭ್ರಷ್ಟಾಚಾರಕ್ಕೆ ಆಹಾರವಾಗುತ್ತಿದೆ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಇರುವ ಕಾನೂನುಗಳು ಸಮರ್ಪಕವಾಗಿ ಅನುಷ್ಠಾನ ಆಗದೇ ಇರುವುದರಿಂದ ಲೂಟಿ ಮಾಡುವುದನ್ನು ನಿಯಂತ್ರಿಸುವುದು ಕಷ್ಟವಾಗಿದೆ ಎಂದರು. ನಿವೃತ್ತ ಐಎಎಸ್ ಅಧಿಕಾರಿ ಟಿ.ಆರ್.ರಘುನಂದನ್ ಮಾತನಾಡಿ, ರಾಜ್ಯದಲ್ಲಿ ಪಾರದರ್ಶಕ ಕಾಯ್ದೆ ಜಾರಿಗೊಳಿಸಲಾಗಿದೆ. ಇವು ಟೆಂಡರ್ ಪ್ರಕ್ರಿಯೆಯಲ್ಲಿ ಮಾತ್ರ ಅನ್ವಯವಾಗುತ್ತದೆ. ಹೀಗಾಗಿ ಭ್ರಷ್ಟಾಚಾರಗಳೆಲ್ಲವೂ ಟೆಂಡರ್‌ನಿಂದ ಮೊದಲು ಹಾಗೂ ನಂತರದಲ್ಲಿ ನಡೆಯುತ್ತದೆ. ಕಾಮಗಾರಿ ಅಥವಾ ಯೋಜನೆಯ ಅನುಷ್ಠಾನದ ಎಲ್ಲ ಹಂತದಲ್ಲಿ ಕಾಯ್ದೆ ಅನ್ವಯವಾಗುವುದಿಲ್ಲ. ಇಂತಹ ವಿಚಾರಗಳು ಬದಲಾಗಬೇಕು ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಶ್ರೀಕುಮಾರ್, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ವೆಂಕಟೇಶ್ ಪ್ರಸಾದ್, ಸುನಿಲ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇಂದಿನ ದಿನದಲ್ಲಿ ಮನುಷ್ಯನಿಗೆ ಭಯ ಎಂಬುದೇ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿ ಜನರು ಅವಿದ್ಯಾವಂತರಾಗಿದ್ದರೂ, ದೇವರು ಹಾಗೂ ಸಮಾಜಕ್ಕೆ ಹೆದರುತ್ತಿದ್ದರು. ಕೆಟ್ಟ ಕೆಲಸ ಮಾಡಿದರೆ ಸಮಾಜದಿಂದ ತಿರಸ್ಕೃತರಾಗುವ ಭೀತಿಯಿಂದ ಬದುಕುತ್ತಿದ್ದರು. ವಿದ್ಯಾವಂತರಾಗಿರುವ ಇಂದಿನ ಜನಾಂಗ ಮಾನವೀಯ ಮೌಲ್ಯಗಳನ್ನು ಮರೆತು ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ.