×
Ad

ಗದಗ ಜಿಲ್ಲೆ ಸಾಹಿತಿಗಳ ಜನ್ಮ ತಾಣ : ಎಚ್.ಕೆ.ಪಾಟೀಲ

Update: 2017-08-05 22:54 IST

ಗದಗ ಅ. 05 : ಕನ್ನಡ ನಾಡಿಗೆ ಸಾಹಿತ್ಯ , ಸಂಗೀತ , ಕಲೆ ರಂಗದಲ್ಲಿ  ಅಪೂರ್ವ ಕೊಡುಗೆ ನೀಡಿರುವ ಗದಗ ಜಿಲ್ಲೆಯ ಇತಿಹಾಸ ಭವ್ಯವಾಗಿದ್ದು, ಪರಂಪರೆ ದಿವ್ಯವಾಗಿದ್ದು  ಭಾರತ ರತ್ನಗಳಾಗುವ ಹತ್ತು ಹಲವಾರು ಪ್ರತಿಭೆಗಳಿಗೆ ಜನ್ಮ ನೀಡಿದ ತಾಣವಾಗಿದೆ  ಎಂದು ಜಿಲ್ಲಾ  ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಜಿಲ್ಲಾಡಳಿತ ಭವನದ  ಎದುರಿಗೆ 1 ಎಕರೆ 30 ಗುಂಟೆ ಜಾಗೆಯಲ್ಲಿ  6.08 ಕೋಟಿ ರೂ. ವೆಚ್ಚದಲ್ಲಿ  ನಿರ್ಮಾಣಗೊಂಡಿರುವ ಜಿಲ್ಲಾ ಕನ್ನಡ  ಸಾಹಿತ್ಯ ಭವನವನ್ನು  ಉದ್ಘಾಟಿಸಿ   ಅವರು ಮಾತನಾಡಿದರು.

ಕುಮಾರವ್ಯಾಸರ ಗದುಗಿನ ಭಾರತವಾಗಿ ಚಾರಿತ್ರಿಕ ಸ್ಥಾನ  ನೀಡಿದ್ದ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ  ಕನ್ನಡಿಗರ ಮನಸ್ಸುಗಳನ್ನು ಒಂದುಗೂಡಿಸಿ ಏಕೀಕರಣಕ್ಕೆ  ಬೀಜಾಂಕುರ ಮಾಡಿದ ಹುಯಿಲಗೋಳ ನಾರಾಯಣರಾಯ  ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ದುರ್ಗಸಿಂಹ, ನಯಸೇನ, ಚಾಮರಸ, ವೆಂಕೋಬರಾಯರು, ಜಿ.ಬಿ. ಜೋಶಿ, ಆರ್.ಸಿ. ಹಿರೇಮಠ, ಮುಗಳಿ, ಭೂಸನೂರಮಠ, ಕಲಬುರ್ಗಿ,  ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ, ಜನಪದ ಕ್ಷೇತ್ರದಲ್ಲಿ ಸೊಮಶೇಖರ ಇಮ್ರಾಪುರ, ನಾಟಕ ಕ್ಷೇತ್ರದಲ್ಲಿ ಎಚ್.ಎನ್. ಹೂಗಾರ, ಸಂಗೀತ ಕ್ಷೇತ್ರದಲ್ಲಿ ಭೀಮಸೇನ ಜೋಶಿ  ಮುಂತಾದ ದಿಗ್ಗಜರನ್ನು  ನೀಡಿದೆ ಎಂದು ಹೇಳಿದರು.

ಜಿಲ್ಲೆಯು ಎಲ್ಲ ರೀತಿಯಿಂದಲೂ ಅಭಿವೃದ್ಧಿಗೊಳ್ಳುತ್ತಿದ್ದು  ಶಿಕ್ಷಣ ರಂಗದಲ್ಲೂ ಕೂಡ ವೈದ್ಯಕೀಯ ವಿಜ್ಞಾನ ಸಂಸ್ಥೆ,  ಕರ್ನಾಟಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರ,  ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ವಿಶ್ವ ವಿದ್ಯಾಲಯಗಳು ಕಾರ್ಯಾರಂಭಿಸಿವೆ. ಜಿಲ್ಲೆಯು  ನಾಡಿಗಾಗಿ ಸ್ವಾತಂತ್ರ್ಯಕ್ಕಾಗಿ, ಭಾಷೆ ಸಮಾಜಕ್ಕಾಗಿ ಹೋರಾಡಿದ್ದೇ ಹೆಚ್ಚು.  ಆ ಅಭಿಮಾನ ಸದಾ ನಮ್ಮಲ್ಲಿರಲಿ ಎಂದು ಹೇಳಿದರು.

ನೂತನವಾಗಿ ಉದ್ಘಾಟನೆಗೊಂಡಿರುವ ಜಿಲ್ಲಾ ಸಾಹಿತ್ಯ ಭವನ ಸದಾ ಜೀವಂತಿಕೆಯಿಂದ ಕಾರ್ಯನಿರ್ವಹಿಸಿ ಹಿರಿಯ, ಕಿರಿಯ ಸಾಹಿತಿಗಳಿಗೆ  ಶ್ರೇಷ್ಟ ಸಾಹಿತ್ಯ ಕೃತಿಗಳ ನಿರ್ಮಾಣಕ್ಕೆ ಪ್ರೇರಣೆ ನೀಡಲಿ. 

      ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು  ಮಾತನಾಡಿ,  ಜನಪದವೇ ಎಲ್ಲ ಸಾಹಿತ್ಯ ಹಾಗೂ ಸಂಸ್ಕøತಿಯ ಮೂಲವಾಗಿದ್ದು ಅನುಭವದ ಮಾತುಗಳೇ ಸಾಹಿತ್ಯವಾಗಿದೆ.   ಪಂಚಾಕ್ಷರ ಗವಾಯಿಗಳ ಆಶ್ರಮದಲ್ಲಿ 1.20 ಲಕ್ಷ ಸಂಗೀತ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದರೆಂಬುದು ನಿಜಕ್ಕೂ ಅಭಿಮಾನದ ಸಂಗತಿಯಾಗಿದೆ   ಎಂದರು.          

ಡಾ. ಗಿರಡ್ಡಿ  ಗೋವಿಂದರಾಜ ಮಾತನಾಡಿ,  ಜಿಲ್ಲಾ ಕನ್ನಡ   ಸಾಹಿತ್ಯ ಭವನ ನಿಜಕ್ಕೂ ಸುಂದರವಾಗಿ ನಿರ್ಮಿಸಲಾಗಿದ್ದು ಇದರಿಂದ ಗದುಗಿಗೆ ವಿಶೇಷ ಗೌರವ  ಬಂದಿದೆ.ಜಿಲ್ಲೆಯ ಇತಿಹಾಸದ  ಮರುನಿರ್ಮಾಣ ಸೇರಿದಂತೆ ಚಾರಿತ್ರ್ಯಕ ವಿಷಯಗಳ ಮಾಹಿತಿ ಕೇಂದ್ರವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಭವನ ರೂಪಗೊಳ್ಳಬೇಕು.  ಹೊಸ ಬರವಣಿಗೆಗೆ ಪ್ರೇರೇಪಿಸುವ ಯುವಜನರಲ್ಲಿ ಸಾಹಿತ್ಯಾಸಕ್ತಿ ಹೆಚ್ಚಿಸುವ  ಪ್ರಯತ್ನ ನಡೆಯಬೇಕು ಎಂದರು.

ಜಾನಪದ ವಿದ್ವಾಂಸ ಸೋಮಶೇಖರ ಇಮ್ರಾಪುರ ಮಾತನಾಡಿ,  ಈ ಸಾಹಿತ್ಯಭವನದಿಂದ ಜನಸಾಮಾನ್ಯರ    ಸಮಾನಮನಸ್ಕರ ಸಾಹಿತ್ಯಕ, ರಂಗ  ನಾಟಕ, ಹಾಡುಪಾಡು , ಸಾಂಸ್ಕøತಿಕ ಚಟುವಟಿಕೆಗಳಿಗೆ  ಇದರಿಂದ ಉತ್ತಮ ಉತ್ತೇಜನ ದೊರೆಯಲಿ ಎಂದು ಆಶಿಸಿದರು.

ಜಿಲ್ಲೆಯ ಕ.ಸಾ.ಪ ಅಧ್ಯಕ್ಷ  ಪ್ರೊ.ಸಿ.ವಿ. ಕೆರಿಮನಿ, ಪ್ರಾ. ಕೆ.ಬಿ. ತಳಗೇರಿ, ಪ್ರಾ. ಎ.ಬಿ. ಹಿರೇಮಠ,  ಎ.ಓ. ಪಾಟೀಲ, ಶಿವಾನಂದ ನಾಯಕ್, ವಿಶ್ವನಾಥ, ದೇವರಾಜ ಹಿರೇಮಠ, ರವಿ ಶಿಶ್ವಿನಹಳ್ಳಿ, ಮುತ್ತು ಮುಲ್ಕಿಪಾಟೀಲ, ವಾಸ್ತು ಶಿಲ್ಪಿ ಮಾಲತೇಶ ಪಾಟೀಲ, ಹಾಗೂ ಮಾಜಿ ಸಂಸದ ಐ.ಜಿ. ಸನದಿ ಅವರನ್ನು   ಸನ್ಮಾನಿಸಲಾಯಿತು. ಇದೇ  ಸಂದರ್ಭದಲ್ಲಿ  ಗದಗ ಕಸಾಪ ಹೊರತಂದ 1 ವರ್ಷದ ಸಾರ್ಥಕ ಹೆಜ್ಜೆ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಯಿತು. 

 ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಚಿತ್ರಕಲಾ ಕ್ಷೇತ್ರಕ್ಕ ತಮ್ಮನ್ನು ಅರ್ಪಿಸಿಕೊಂಡಿದ್ದ ಮುರಿಗೆಪ್ಪ ಚಟ್ಟಿ ಅವರ ಸ್ಮರಣೆಯಲ್ಲಿ ಆರ್ಟ ಗ್ಯಾಲರಿ ನಿರ್ಮಾಣವಾಗಿದ್ದು ತುಂಬ ಸಂತಸ ಸಂಗತಿಯಾಗಿದೆ.  ಹಿಂದಿನ ಸರ್ಕಾರದಲ್ಲಿ ಘೋಷಣೆಯಾಗಿದ್ದು  ಸಚಿವ ಎಚ್.ಕೆ.ಪಾಟೀಲ ಅವರ ಸತತ ಪ್ರಯತ್ನದಿಂದ  ಜಿಲ್ಲಾ ಕನ್ನಡ ಸಾಹಿತ್ಯ ಭವನ ಉತ್ತಮವಾಗಿ  ರೂಪಗೊಂಡಿದ್ದು   ಗದುಗಿಗೆ  ಅಭಿಮಾನದ  ತರುವ ಸಂಗತಿಯಾಗಿದೆ. 

 ಸಾನಿಧ್ಯ ವಹಿಸಿದ್ದ ತೋಂಟದ ಸಿದ್ಧಲಿಂಗ ಮಹಾಸ್ವಾಮೀಗಳು ಸಾನಿಧ್ಯವಹಿಸಿ ಮಾತನಾಡಿ,

ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ,   ಜಿ.ಪಂ. ಉಪಾಧ್ಯಕ್ಷೆ  ರೂಪಾ ಅಂಗಡಿ,  ತಾಪಂ  ಉಪಾಧ್ಯಕ್ಷ  ಎ.ಆರ್. ನದಾಫ್,      ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ,  ಎಸ್.ಪಿ. ಬಳಿಗಾರ,   ಜಿ.ಪಂ. ಸದಸ್ಯ ಸಿದ್ಧು ಪಾಟೀಲ, ಹನುಮಂತಪ್ಪ ಪೂಜಾರ, ಶೋಭಾ ಮೇಟಿ, ನಗರಸಭೆ ಸದಸ್ಯ  ಎಂ.ಸಿ.ಶೇಖ್,   ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ಸಂತೋಷಬಾಬು, ಜಿ.ಪಂ. ಸಿ.ಇ.ಓ ಮಂಜುನಾಥ ಚವ್ಹಾಣ,  ಉಪ ವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ ಸೇರಿದಂತೆ ಮುಂತಾದವರು  ಉಪಸ್ಥಿತರಿದ್ದರು.         

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ  ಶರಣು ಗೋಗೇರಿ ಸ್ವಾಗತಿಸಿದರು . ಡಾ. ಜಯದೇವಿ ಜಂಗಮಶೆಟ್ಟಿ ನಾಡಗೀತೆ ಪ್ರಸ್ತುತಿಸಿದರು.    ವಿವೇಕಾನಂದ ಗೌಡ ಪಾಟೀಲ, ಜಯಶ್ರೀ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು.  ಬಾಹುಬಲಿ ಜೈನರ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News