ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಗರಂ

Update: 2017-08-05 17:39 GMT

ಚಿಕ್ಕಬಳ್ಳಾಪುರ, ಆ.5: ಜನರ ಸಮಸ್ಯೆ ಅರಿಯಲು ಅಥವಾ ಸರ್ಕಾರಿ ಯೋಜನೆಗಳ ಅನುಷ್ಟಾನಗಳ ಕುರಿತು ಜನರೊಂದಿಗೆ ನೇರವಾಗಿ ಚರ್ಚಿಸುವ ಸಲುವಾಗಿ ಆಯೋಜಿಸುವ ಜನಸ್ಫಂಧನ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಜಿಪಂ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಅರೂರು ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಫಂಧನ ಕಾರ್ಯಕ್ರಮದಲ್ಲಿ ಜನರ ಕೊರತೆ ಕಂಡು ಸಿಡಿಮಿಡಿಗೊಂಡ ಅಧ್ಯಕ್ಷ ಕೇಶವರೆಡ್ಡಿ ಸಭೆ ನಡೆಯುವ ಬಗ್ಗೆ ಪ್ರಚಾರ ಅಥವಾ ಮಾಹಿತಿ ನೀಡುವಲ್ಲಿ ಅಧಿಕಾರಿಗಳ ತೋರಿರುವ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದ ಅವರು, ಸರ್ಕಾರ ಕೈಗೊಳ್ಳುವ ಜನಪರ ಕಾರ್ಯಗಳ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡಿದಲ್ಲಿ ಮಾತ್ರ ಯೋಜನೆ ಅನುಷ್ಟಾನಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದರು.

ಸಭೆಯಲ್ಲಿ ಜನರ ಸಂಖ್ಯೆ ಕಡಿಮೆ ಇರುವುದರಿಂದ ಸಭೆ ನಡೆಯುವ ಯಾವ ಉದ್ದೇಶವೂ ಸಾರ್ಥಕವಾಗುವುದಿಲ್ಲ, ಬದಲಿಗೆ ಸಮಯ ವ್ಯರ್ಥವಾಗಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿ ಅಧಿಕಾರಿ ಸಭೆ ನಡೆಯುವ ವಾರದ ಮುಂಚಿಯೇ ಕರಪತ್ರ ಹಂಚಲಾಗಿದೆ, ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲೂ ತಮಟೆ ಬಾರಿಸಿ ಡಂಗುರ ಸಾರಲಾಗಿದೆ. ಇದರಿಂದ ತಿಳುವಳಿಕೆ ಪಡೆದ ಕೆಲ ಗ್ರಾಮಸ್ಥರು ಸಭೆಗೆ ಬರಲು ಸಾಧ್ಯವಾಗಿದೆ ಎಂದರು. 

ಆಯಾ ಗ್ರಾಮಗಳಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಶಿಷ್ಟಚೇತನರ ವೇತನ ಮುಂತಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಅಧಿಕಾರಿಯೊಂದಿಗೆ ಸಹಕರಿಸಿ ಅರ್ಹರಿಗೆ ಸೌಲಭ್ಯ ಲಭಿಸುವಂತೆ ಗ್ರಾಪಂ ಸದಸ್ಯರು ಕ್ರಮವಹಿಸಬೇಕು ಎಂದು ಸಲಹೆ ನೀಡಿದ ಅಧ್ಯಕ್ಷ ಕೇಶವರೆಡ್ಡಿ, ಸಮಸ್ಯೆ ನಿವಾರಣೆಯಲ್ಲಿ ಅಥವಾ ಯೋಜನೆ ಅನುಷ್ಟಾನದಲ್ಲಿ ರಾಜಕೀಯ ಬೆರಸದೆ ಪ್ರಾಮಾಣಿಕ ಕೆಲಸ ನಿರ್ವಹಿಸಬೇಕು ಎಂದರು.

ತಹಸೀಲ್ದಾರ್ ನರಸಿಂಹಮೂರ್ತಿ ಮಾತನಾಡಿ, ಸಮಸ್ಯೆ ನಿವಾರಣೆ ದೃಷ್ಠಿಯಿಂದ ಜನರ ನಡುವೆಯೇ ಇದ್ದು, ಕಾರ್ಯನಿರ್ವಹಿಸಲು ಅಧಿಕಾರಿಗಳು ಆಸಕ್ತರಾಗಿದ್ದು, ಮೂಲ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡುವ ಮೂಲಕ ಕೆಲಸ ನಿರ್ವಹಿಸಲ್ಲಿದ್ದೇವೆ. ಗ್ರಾಮದ ರಸ್ತೆ, ಚರಂಡಿ, ಬೀದಿ ದೀಪ, ನೀರಿನ ಸಮಸ್ಯೆ ಹೊಗಲಾಡಿಸಲು ಜನಸ್ಫಂಧನ ಸಭೆ ನಡೆಸಲಾಗುತ್ತದೆ ಎಂದರು.  ಈಗಾಗಲೇ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿರುವ ಕಾರಣ ಪ್ರತಿ ಗ್ರಾಮಕ್ಕೆ ಖುದ್ದು ಅಧಿಕಾರಿಗಳು ತೆರಳಿ ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ ಎಂದರು. 

ಇಒ ಸಂಜೀವಪ್ಪ , ಹಿರೆನಾಗವಲ್ಲಿ ಗ್ರಾಪಂ ಉಪಾಧ್ಯಕ್ಷ ಮೋಹನ್, ಪೆರೇಸಂದ್ರ ಗ್ರಾಪಂ ಅಧ್ಯಕ್ಷ ಚೆನ್ನಕೇಶವಪ್ಪ ಮತ್ತಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News