×
Ad

ಯಾವುದೇ ಕಾರಣಕ್ಕೂ ವೀರಶೈವ-ಲಿಂಗಾಯಿತರನ್ನು ಒಡೆಯಲು ಬಿಡುವುದಿಲ್ಲ: ಯಡಿಯೂರಪ್ಪ

Update: 2017-08-05 23:20 IST

ಬೆಂಗಳೂರು,ಆ.5: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜಾತಿಯ ವಿಷ ಬಿತ್ತಲು ಹೊರಟಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವುದೇ ಕಾರಣಕ್ಕೂ ವೀರಶೈವ ಮತ್ತು ಲಿಂಗಾಯಿತರನ್ನು ಒಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಶನಿವಾರ ನಗರದ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಪಾಲ್ಗೊಂಡು, ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಲಿಂಗಾಯಿತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯಿತರನ್ನು ಒಡೆದು ಆಳಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರ ಮೇಲಿನ ಆರೋಪಗಳನ್ನು ಮುಚ್ಚಿಡಲು ಬಿಜೆಪಿ ನಾಯಕರ ಮೇಲಿನ ಹಳೆ ಪ್ರಕರಣಗಳನ್ನು ಕೆದಕಲು ಹೊರಟಿದ್ದಾರೆ. ಸರಕಾರದ ಯಾವುದೇ ಕುತಂತ್ರಕ್ಕೂ ಬಗ್ಗುವುದಿಲ್ಲ. ಯಾವುದೇ ಕ್ರಮ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಗೋವಾ ಮುಖ್ಯಮಂತ್ರಿ ಜೊತೆ ಮಾತುಕತೆ: ಕಳಸಾ ಬಂಡೂರಿ ಯೋಜನೆಯಲ್ಲಿ ರಾಜ್ಯಕ್ಕೆ ನ್ಯಾಯ ಒದಗಿಸುವ ಸಲುವಾಗಿ ಸೆಪ್ಟೆಂಬರ್ ಮೊದಲ ವಾರದೊಳಗೆ ರಾಜ್ಯ ಬಿಜೆಪಿ ಸಂಸದರು ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಬಿಜೆಪಿ ವತಿಯಿಂದ ಆ.15ರ ನಂತರ ರಾಜ್ಯದಲ್ಲಿ 2ನೆ ಹಂತದ ಪ್ರವಾಸ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಪ್ರವಾಸ ಕೈಗೊಳ್ಳದ ಹೆಚ್ಚು ಜನ ಬೆಂಬಲವಿರುವ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News