ಕಿರಂ ಕಾಡಿದಷ್ಟು ಬೇರೆ ಯಾರೂ ಕಾಡಿಲ್ಲ: ಅಗ್ರಹಾರ ಕೃಷ್ಣಮೂರ್ತಿ

Update: 2017-08-05 17:52 GMT

ಬೆಂಗಳೂರು, ಆ.5: ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ದಿಗ್ಗಜರನ್ನು ಕಳೆದುಕೊಂಡಿದ್ದೇವೆ. ಆದರೆ, ಕಿ.ರಂ. ಕಾಡಿದಷ್ಟು ಬೇರೆ ಯಾರೂ ಕಾಡಿಲ್ಲ. ಹೀಗಿದ್ದರೂ, ಕಿ.ರಂ.ನಾಗರಾಜ ಕುರಿತು ತಿಳಿದಿರುವ ಜನರ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಿಸಿದ್ದಾರೆ. ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜನಸಂಸ್ಕೃತಿ, ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ಕಾಡುವ ಕಿರಂ’ ಅಹೋರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಲೋಕದಲ್ಲಿ ಕಿ.ರಂ.ನಾಗರಾಜ ಒಬ್ಬ ಅಜಾತ ಶತ್ರುವಾಗಿದ್ದಾರೆ. ಅವರಿಂದು ಬದುಕಿದ್ದರೆ ಸಾವಿರಾರು ಪುಟಗಳಷ್ಟು ಬರಹ ನಮ್ಮ ಸಾಹಿತ್ಯ ಲೋಕಕ್ಕೆ ಸೇರಿಕೊಳ್ಳುತ್ತಿತ್ತು. ಕಿ.ರಂ ಎಂದೂ ಒಂದು ಪ್ರಕಾರಕ್ಕೆ ಸೀಮಿತವಾಗದೇ ಎಲ್ಲ ಪ್ರಕಾರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಎಲ್ಲ ಸಂಪ್ರದಾಯಗಳಿಗೂ ಲಗ್ಗೆಯಿಟ್ಟು, ಎಲ್ಲರನ್ನೂ ಜಾಗೃತಿಗೊಳಿಸುವಲ್ಲಿ ಅಪಾರವಾದ ಶ್ರಮವಹಿಸಿದ್ದಾರೆ ಎಂದು ಅವರು ತಿಳಿಸಿದರು.

ಕವಿ ಎಲ್.ಎನ್.ಮುಕುಂದರಾಜ್ ಮಾತನಾಡಿ, ಸಮಾಜದಲ್ಲಿ ಕವಿಗಳ ಸಂಖ್ಯೆ ಹೆಚ್ಚಾದಂತೆ ಮಾನವೀಯ ವೌಲ್ಯಗಳುಳ್ಳ, ಸಮ ಸಮಾನತೆಯ, ಪ್ರಜಾಪ್ರಭುತ್ವವಾದಿ ಸಮಾಜ ನಿರ್ಮಾಣವಾಗುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ವೌಲ್ಯಗಳಿಗೆ ಧಕ್ಕೆ ಬಂದಾಗ ಮೊದಲು ಅದನ್ನು ಖಂಡಿಸುವುದು ಲೇಖಕರು ಮತ್ತು ಕವಿಗಳು. ಆದುದರಿಂದಲೇ ಜಾತಿವಾದಿಗಳು, ಮೂಲಭೂತವಾದಿಗಳು, ಭಯೋತ್ಪಾದಕರು ಮತ್ತು ಕೋಮುವಾದಿಗಳು ಲೇಖಕರನ್ನು, ಬರಹಗಾರರನ್ನು ಹಾಗೂ ಕವಿಗಳನ್ನು ಗುರಿಯಾಗಿಸಿಕೊಂಡು ಹತ್ಯೆ, ಬೆದರಿಸುವುದು ಮಾಡುತ್ತಿರುತ್ತಾರೆ ಎಂದರು.

ಪ್ರಜಾಪ್ರಭುತ್ವದ ಉಳಿವಿಗಾಗಿ ಕವಿಗಳ ಪಾಲು ಇದೆ. ಹೀಗಾಗಿ ಕವಿಗಳು ಜಾಗೃತರಾಗಬೇಕು. ಒಂದು ಸಾಲು ಕವಿತೆ ಬರೆಯುವ ಕವಿಯಿಂದ ಆರಂಭವಾಗಿ ಎಲ್ಲ ರೀತಿಯ ಕವಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು, ಪ್ರೋತ್ಸಾಹಿಸಬೇಕು. ಕಿ.ರಂ.ನಾಗರಾಜ ತನ್ನ ಕಾಲದ ಕವಿಗಳನ್ನು ಬೆಳೆಸುತ್ತಿದ್ದರು, ಹೊಸಬರಿಗೆ ಹಲವಾರು ಅವಕಾಶಗಳನ್ನು ಕಲ್ಪಿಸುವುದರ ಮೂಲಕ ಪ್ರೋತ್ಸಾಹಿಸುತ್ತಿದ್ದರು ಎಂದು ಅವರು ತಿಳಿಸಿದರು.

ಕಿ.ರಂ.ನಾಗರಾಜ ನೆನಪು ಕುರಿತ ರಚಿಸಿರುವ ಪುಸ್ತಕದ ಬಗ್ಗೆ ಮಾತನಾಡಿದ ಅವರು, ಕಿ.ರಂ. ಬಗೆಗಿನ ಕವಿತೆಗಳ ಬದಲಿಗೆ, ಅವರು ಅನುಸರಿಸಿದ ಮಾರ್ಗಗಳನ್ನು ಮರು ನೆನಪಿಸುವ, ವಿಮರ್ಶಿಸುವ ಕವಿತೆಗಳನ್ನು ಲೇಖಕರು ಬರೆದಿದ್ದಾರೆ. ಅವರ ಆಲೋಚನಾ ಕ್ರಮಗಳನ್ನು ಹಾಗೂ ಅವರಿಗೆ ಸಾಹಿತ್ಯದ ಕಡೆಗಿದ್ದ ಗಮನವನ್ನು ವಿಶ್ಲೇಷಿಸಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ, ಕಿ.ರಂ.ನಾಗರಾಜ ಅವರ ಪುತ್ರಿ ಕೆ.ಎಸ್.ಚಂದನ, ಬೇಲೂರು ರಘುನಂದನ್, ಪ್ರದೀಪ್ ಮಾಲ್ಗುಡಿ ಉಪಸ್ಥಿತರಿದ್ದರು. ಇದೇ ವೇಳೆ ರಾಜಪ್ಪ ದಳವಾಯಿ, ಬಿ.ಟಿ.ಲಲಿತಾನಾಯಕ್, ತುಂಬಾಡಿ ರಾಮಯ್ಯ, ಕುರುವ ಬಸವರಾಜು ಹಾಗೂ ಎನ್.ಎಸ್.ಶಂಕರ್ ಅವರಿಗೆ ಕಿರಂ ಪುರಸ್ಕಾರ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News