ಪತ್ರಿಕಾ ರಂಗದ ಮೇಲಿನ ವಿಶ್ವಾಸದ ವಿರುದ್ಧ ಪಿತೂರಿ: ದಿನೇಶ್ ಅಮೀನ್ ಮಟ್ಟು
ಮಡಿಕೇರಿ ಆ.6: ಪತ್ರಿಕಾ ವೃತ್ತಿ ಇಂದು ಉದ್ಯಮವಾಗಿ ಬದಲಾಗಿದ್ದು, ಹಲವು ಅನಾಹುತಕಾರಿ ಬೆಳವಣಿಗೆಗಳಿಗೆ ಎಡೆ ಮಾಡಿಕೊಟ್ಟಿದೆ. ಜನರು ಪತ್ರಿಕಾ ರಂಗದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬೇಕೆನ್ನುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡಗು ಪ್ರೆಸ್ ಕ್ಲಬ್‌ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಮತ್ತು ಕಾರ್ಯಚಟುವಟಿಕೆಗಳ ಆರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ದಿಕ್ಸೂಚಿ ಭಾಷಣ ಮಾಡಿದರು.
ಪತ್ರಿಕೋದ್ಯಮ ಇಂದು ಬಂಡವಾಳ ಹಾಕಿ ಲಾಭ ತೆಗೆಯುವ ಪರಿಸ್ಥಿತಿಗೆ ಬಂದು ತಲುಪಿದೆ. ಟಾಯ್ಲೆಟ್ ಸೋಪ್ ಮಾರಾಟ ಮತ್ತು ಪತ್ರಿಕೆಯ ಮಾರಾಟ ಒಂದೇ ಆಗಿದೆ. ವೃತ್ತಿಯಲ್ಲಿ ಸಾಮಾಜಿಕ ಜವಾಬ್ದಾರಿ ಇರಬೇಕು. ಪತ್ರಿಕೆಗಳನ್ನು ಸುಳ್ಳು ಹೇಳಿ ಮಾರಾಟ ಮಾಡಬಾರದು. ಇಂದು ಜಾಹೀರಾತುಗಳನ್ನು ಮೊದಲು ಹಾಕಿ ಉಳಿದ ಪುಟಗಳಲ್ಲಿ ಸುದ್ದಿಯನ್ನು ಹಾಕುವಂತಹ ಪರಿಸ್ಥಿತಿ ಬಂದಿದೆಯೆಂದು ದಿನೇಶ್ ಅಮೀನ್ ಮಟ್ಟು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ಸವ ವ್ಯವಸ್ಥೆಗೆ ಅಪಾಯ
ಪತ್ರಿಕೋದ್ಯಮದ ಬಿಸಿನೆಸ್ ಮಾಡೆಲ್‌ನಲ್ಲೆ ನ್ಯೂನ್ಯತೆ ಇದೆಯೆಂದು ಅಭಿಪ್ರಾಯಪಟ್ಟ ಅವರು, ಮಾಧ್ಯಮಗಳ ಮೇಲೆ ಜನ ವಿಶ್ವಾಸ ಕಳೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಲೆ ಈ ರೀತಿಯ ಬೆಳವಣಿಗೆಯ ಷಡ್ಯಂತ್ರ ನಡೆಯುತ್ತಿದೆ ಎನ್ನುವ ಸಂಶಯ ಮೂಡುತ್ತದೆ. ಶಕ್ತಿಶಾಲಿಯಾದ ಮಾಧ್ಯಮ ಮತ್ತು ಪ್ರಜಾಪ್ರಭುತ್ವ ಒಟ್ಟಿಗೆ ಸಾಗಬೇಕಾಗುತ್ತದೆ. ಜನರು ಮಾಧ್ಯಮದ ಮೇಲಿನ ವಿಶ್ವಾಸವನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾದಂತೆ ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದರು.
ಇಂದು ಪತ್ರಕರ್ತರು, ಮಾಧ್ಯಮಗಳ ಮಾಲೀಕರು ಹಾಗೂ ಓದುಗರ ಮನೋಭಾವ ಬದಲಾಗಿದೆ. ಪತ್ರಕರ್ತರನ್ನು ಜನರು ಸಮಾಜ ಸೇವಕರಂತೆ ನೋಡುತ್ತಾರೆ. ಯುವ ಪತ್ರಕರ್ತರು ಓದಿನ ಕಡೆಗೆ ಹೆಚ್ಚು ಗಮನ ಹರಿಸಿದರೆ ಉತ್ತಮ ಪತ್ರಕರ್ತರಾಗಬಹುದು. ಓದಿನಿಂದ ಹೊಸ ಆಲೋಚನೆಗಳು, ಸ್ಪಷ್ಟತೆಗಳು ಸಿಗುತ್ತದೆ. ಜ್ಞಾನ ಸಂಪಾದನೆಯಿಂದ ಉತ್ತಮ ಪತ್ರಕರ್ತರಾಗಲು ಸಾಧ್ಯವೆಂದ ದಿನೇಶ್ ಅಮೀನ್ ಮಟ್ಟು, ಪ್ರತಿಯೊಬ್ಬ ಪತ್ರಕರ್ತನಿಗೆ ಸೂಕ್ಷ್ಮ ಮನಸ್ಸಿರಬೇಕು. ಬಡವರ ಬಗ್ಗೆ ತಿರಸ್ಕಾರ ಮನೋಭಾವನೆ ಇರಬಾರದು. ಸಾಮಾಜಿಕ ಭದ್ರತೆಯ ಲೋಪದ ಬಗ್ಗೆ ಆಲೋಚನೆ ಮಾಡುವ ಶಕ್ತಿಯನ್ನು ಹೊಂದಬೇಕು. ಸೂಕ್ಷ್ಮತೆಯನ್ನು ಕಳೆದುಕೊಳ್ಳುವುದು ತಮ್ಮ ವೃತ್ತಿ ಬದುಕಿನ ಅಪಾಯಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಹೆಣಗಳ ಆಸಕ್ತಿ ಬೇಡ
ಹೆಣಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವ ಬದಲು ಬದುಕಿರುವವರ ಬಗ್ಗೆ ಕಾಳಜಿ ತೋರಿದರೆ ಮತ್ತಷ್ಟು ಸಾವುಗಳು ಸಂಭವಿಸುವುದನ್ನು ತಡೆಯಬಹುದೆಂದು ರೈತರ ಆತ್ಮಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಅವರು ಹೇಳಿದರು. ಟಿವಿ ಮಾಧ್ಯಮಗಳಿಗೆ ಉರಿಯುವ ಸುದ್ದಿ ಬೇಕೆಂದು ವಿಷಾದಿಸಿದ ಅವರು, ಇಂದು ಪತ್ರಿಕೆಗಳು ಟಿವಿಯ ಹೆಡ್‌ಲೈನ್‌ಗಳನ್ನೆ ಕಾಪಿ ಮಾಡುತ್ತಿವೆಯೆಂದು ಬೇಸರ ವ್ಯಕ್ತಪಡಿಸಿದರು.
ಟಿವಿಗಳ ಲೀಡ್ ಸುದ್ದಿಯನ್ನು ಪತ್ರಿಕೆಗಳು ನಮ್ಮ ಮುಂದಿನ ದಿನದ ಲೀಡ್‌ನ್ನಾಗಿ ನಿರ್ಧರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಾಧ್ಯಮಗಳಿಂದ ಭಾಷೆ ಕೆಡುತ್ತಿದೆ ಎನ್ನುವ ಟೀಕೆಗಳು ಕೇಳಿ ಬರುತ್ತಿದೆ. ಇದು ನಿಜವಾಗಿದ್ದು, ಭ್ರಷ್ಟ ಸಮಾಜವನ್ನು ಮತ್ತು ಭ್ರಷ್ಟರ ವಿರುದ್ಧ ಹೋರಾಡುವ ಆತುರದಲ್ಲಿ ಮಾಧ್ಯಮಗಳ ಭಾಷೆಯ ಬಳಕೆ ಹದಗೆಡುತ್ತಿದೆಯೆಂದು ಅವರು ಅಭಿಪ್ರಾಯಪಟ್ಟರು.
ಜ್ಞಾನ ಮತ್ತು ಸಿದ್ಧತೆಯ ಕೊರತೆ
ಪತ್ರಕರ್ತರ ವೃತ್ತಿ ಬದುಕು ಮಾತ್ರ ಸರಿ ಇದ್ದರೆ ಸಾಲದು ತಮ್ಮ ವೈಯಕ್ತಿಕ ಬದುಕು ಕೂಡ ಸರಿಯಾಗಿರಬೇಕೆಂದ ದಿನೇಶ್ ಅಮೀನ್ ಮಟ್ಟು, ಉತ್ತಮ ಸಂಗವನ್ನು ಹೊಂದಿರಬೇಕೆಂದರು. ಯಾವುದೋ ಅನ್ಯ ಗ್ರಹದಿಂದ ನಾವು ಬಂದಿದ್ದೇವೆ ಎನ್ನುವ ರೀತಿಯಲ್ಲಿ ಪತ್ರಕರ್ತರ ವರ್ತನೆ ಇರಬಾರದು. ನಾವು ಮಾಡುವ ವರದಿ ನಮಗಿಂತ ದೊಡ್ಡದು ಎನ್ನುವ ಮನೋಭಾವನೆ ಇರಬೇಕು. ಹೊಸ ತಲೆಮಾರಿನ ಪತ್ರಕರ್ತರಲ್ಲಿ ಜ್ಞಾನ ಮತ್ತು ಸಿದ್ಧತೆಯ ಕೊರತೆ ಇದೆ. ಓದುಗರ ನಂಬಿಕೆಯನ್ನು ಉಳಿಸುವ ಕೆಲಸವನ್ನು ಪತ್ರಿಕೆಗಳು ಮಾಡಬೇಕಾಗಿದೆ. ಆದರೆ, ಇಂದು ಜಾಹೀರಾತಿನ ಭರಾಟೆಯಿಂದ ಪತ್ರಿಕೆಗಳಿಗೆ ಓದುಗರು ಬೇಕಾಗಿಲ್ಲ. ಕೇವಲ ಗ್ರಾಹಕರು ಇದ್ದರೆ ಸಾಕೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದಿಸಿದರು.
ಪತ್ರಿಕೋದ್ಯಮದ ಮೇಲಿನ ವಿಶ್ವಾಸವನ್ನು ಜನರು ಕಳೆದುಕೊಳ್ಳಬೇಕೆಂದು ವ್ಯವಸ್ಥಿತ ಪಿತೂರಿಗಳು ನಡೆಯುತ್ತಿದೆ. ಯಾವುದೇ ಕಾರಣಕ್ಕು ಪತ್ರಕರ್ತರು ನಿರಾಶವಾದಿಗಳಾಗಬಾರದೆಂದು ದಿನೇಶ್ ಅಮೀನ್ ಮಟ್ಟು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೆಸ್‌ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಬಿ.ಜಿ.ಅನಂತ ಶಯನ, ಪತ್ರಕರ್ತರು ನ್ಯಾಯಾಲಯದಂತೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಾರೆ. ವ್ಯಕ್ತಿತ್ವ, ಕಾರ್ಯದಕ್ಷತೆಯೊಂದಿಗೆ ಮಾನವೀಯತೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು. ಪತ್ರಕರ್ತರಿಗೆ ಸ್ವಸಾಮರ್ಥ್ಯ ಮುಖ್ಯವೇ ಹೊರತು, ತಾತ್ಕಾಲಿಕ ನಾಯಕಗಿರಿಗೆ ಪ್ರಯತ್ನಿಸಬಾರದೆಂದರು. ಸಮಾಜದಲ್ಲಿ ಎಲ್ಲರನ್ನು ಸಮಾನತೆಯಿಂದ ನೋಡುವ ಗುಣವನ್ನು ಪತ್ರಕರ್ತರು ಹೊಂದಿರಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದು, ಇದರ ಜೊತೆಯಲ್ಲಿ ಮೌಲ್ಯವೂ ಉಳಿಯಬೇಕೆಂದರು.
ಪ್ರೆಸ್‌ಕ್ಲಬ್‌ನ ನೂತನ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜನರ ವಿಶ್ವಾಸ ಗಳಿಸುವ ಸುದ್ದಿಯನ್ನು ಮಾಡುವ ಮೂಲಕ ಸಮಾಜಮುಖಿ ಚಿಂತನೆಗಳನ್ನು ಪತ್ರಕರ್ತರು ಮಾಡಬೇಕೆಂದರು. ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಕೆ.ಬಿ.ಮಂಜುನಾಥ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಕ್ಲಬ್‌ನ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.