ಒಪ್ಪಿಕೊಳ್ಳುವ ಮನೋಧರ್ಮ ಅಗತ್ಯ: ಹಮೀದ್ ಅನ್ಸಾರಿ

Update: 2017-08-07 06:10 GMT

ಬೆಂಗಳೂರು, ಆ.6: ಪರಸ್ಪರ ತಿಳುವಳಿಕೆ, ಒಪ್ಪಿಕೊಳ್ಳುವ ಮನೋಧರ್ಮ ಅಗತ್ಯವಿದ್ದು, ಇದರ ಜೊತೆಗೆ ಸಹಿಷ್ಣುತೆಯ ಬಹುತ್ವದ ಸಮಾಜ ಕಟ್ಟಬೇಕಾಗಿದೆ ಎಂದು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕರೆ ನೀಡಿದ್ದಾರೆ.

ರವಿವಾರ ನಗರದ ಬನಶಂಕರಿಯ ಪಿಇಎಸ್ ವಿವಿಯ ಆವರಣದಲ್ಲಿ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ 25ನೆ ವಾರ್ಷಿಕ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಹುತ್ವದಿಂದಾಗಿ ಸಂವಿಧಾನವು ಪ್ರಜಾಸತ್ತಾತ್ಮಕ ರಾಜ್ಯಾಡಳಿತ ಕ್ರಮ ಮತ್ತು ಜಾತ್ಯತೀತ ರಾಷ್ಟ್ರರಚನೆಯನ್ನು ಒಳಗೊಂಡಿದೆ. ಬಹುತ್ವ ಎನ್ನುವುದು ನೈತಿಕ ಮೌಲ್ಯವಾಗಿದ್ದು, ಅದು ಸಾಮಾಜಿಕ ಬಹುತ್ವವನ್ನು ರಾಜಕೀಯ ಮಟ್ಟಕ್ಕೆ ಪರಿವರ್ತಿಸುವ ಮತ್ತು ಬಹುತ್ವವನ್ನು ಒಳಗೊಂಡ ಏಕ ರಾಜಕೀಯ ವ್ಯವಸ್ಥೆಯನ್ನು ಎಲ್ಲ ಸಂಬಂಧಿತ ಗುಂಪುಗಳನ್ನು ಒಳಗೊಂಡಂತೆ ರಚಿತವಾದ ವ್ಯವಸ್ಥೆಯನ್ನು ರೂಪಿಸಲು ಸಲಹೆ ಮಾಡುತ್ತದೆ ಎಂದು ಹಮೀದ್ ಅನ್ಸಾರಿ ನುಡಿದರು. ರಾಷ್ಟ್ರ ಮಟ್ಟದಲ್ಲಿ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಾಯೋಗಿಕ ರೂಪ ಕೊಡುವುದು ಇಂದಿನ ತುರ್ತು ಅಗತ್ಯವಾಗಿದೆ. ದಲಿತರು, ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರಲ್ಲಿ ಇರುವ ಪೌರ ಸಂಸ್ಥೆಗಳ ಘಟಕಗಳಲ್ಲಿ ಅಸುರಕ್ಷತೆಯ ಕಳವಳವನ್ನು ತೆಗೆದು ಹಾಕಲು ಸಲಹೆಗಳನ್ನು ಸ್ವೀಕರಿಸುವುದು ಇಂದಿನ ಪ್ರಮುಖ ಅಗತ್ಯವಾಗಿದೆ ಎಂದು ತಿಳಿಸಿದರು.

ಸಹಿಷ್ಣುತೆಗಿಂತ ಒಪ್ಪಿಕೊಳ್ಳುವಿಕೆ ಅಥವಾ ಅಂಗೀಕರಿಸುವಿಕೆ ನಮ್ಮಿಳಗೆ ಆರಂಭವಾಗುವ ಒಂದು ಪಯಣ. ನಮಗಿಂತ ಭಿನ್ನರಾಗಿರುವವರನ್ನು ತಿಳಿದುಕೊಳ್ಳುವ ಮತ್ತು ಇತರರನ್ನು ಒಪ್ಪಿಕೊಳ್ಳುವ ಗುಣ ಬೇಕಾಗಿದೆ. ಇದಕ್ಕೆ ಸತತ ಚರ್ಚೆ, ಮಾತುಕತೆ ಅಗತ್ಯ. ವರ್ಗ ವೈವಿಧ್ಯತೆ ನಡುವೆ ಸೌಹಾರ್ದತೆ ಪ್ರೋತ್ಸಾಹಿಸಲು ಇದೊಂದು ರಾಷ್ಟ್ರೀಯ ಮೌಲ್ಯವಾಗಬೇಕೆಂದರು.

ಮತೀಯ ಸಹಿಷ್ಣುತೆ ಮತ್ತು ಭ್ರಾತೃತ್ವ ಸಂವಿಧಾನದ ಮೂಲ ಅಂಶಗಳಾಗಿದ್ದು, ರಾಷ್ಟ್ರೀಯ ಸಮಗ್ರತೆ ಮತ್ತು ಧಾರ್ಮಿಕ ಏಕತೆಯನ್ನು ಸಂವಿಧಾನ ಪ್ರತಿಪಾದಿಸುತ್ತದೆ ಎಂದು ಹೇಳಿದ ಅವರು, ಕಾನೂನಿನೆದುರು ಎಲ್ಲರೂ ಸಮಾನರು, ಎಲ್ಲರಿಗೂ ಕಾನೂನಿನ ಸಮಾನ ರಕ್ಷಣೆ ನೀಡುತ್ತದೆ ಎಂದು ಹಮೀದ್ ಅನ್ಸಾರಿ ಹೇಳಿದರು.

 ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ರಾಜೇಂದ್ರ ಬಾಬು, ಕಾನೂನು ಸಚಿವ ಟಿ.ಬಿ.ಜಯಚಂದ್ರ, ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಜಗದೀಶ್ ಸಿಂಗ್ ಕೇಹರ್, ಉಪ ಕುಲಪತಿ ಪ್ರೊ.ಆರ್.ವೆಂಕಟರಾವ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News