ವಿಚಾರಣೆಗೆ ಹಾಜರಾಗಲು ಐಟಿ ಸಮನ್ಸ್ : ಶಿವಕುಮಾರ್‌ಗೆ ಧೈರ್ಯ ತುಂಬಿದ ಸಚಿವರು, ಮುಖಂಡರು

Update: 2017-08-06 11:53 GMT

ಬೆಂಗಳೂರು, ಆ. 6: ಆಘೋಷಿತ ಆಸ್ತಿಯ ದಾಖಲೆ ಪತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತವರ ಕುಟುಂಬದ ಸದಸ್ಯರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಮಾಡಿದೆ.

ಆ.2ರ ಬೆಳಗ್ಗೆಯಿಂದ ನಾಲ್ಕು ದಿನಗಳ ಕಾಲ ಸುದೀರ್ಘ ಅವಧಿ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳು, ಅಪಾರ ಮೊತ್ತದ ಆಘೋಷಿತ ಆಸ್ತಿ ಪತ್ತೆಯ ಬಗ್ಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಸಮನ್ಸ್ ಜಾರಿಗೊಳಿಸಿದ್ದಾರೆ ಎಂದು ಗೊತ್ತಾಗಿದೆ.

ಶಿವಕುಮಾರ್, ಅವರ ಮಾವ ತಿಮ್ಮಯ್ಯ, ಸಹೋದರಿ ಪದ್ಮಾ, ಗುರೂಜಿ ದ್ವಾರಕನಾಥ್, ಉದ್ಯಮಿ ನಾರಾಯಣ ಸೇರಿದಂತೆ ಇನ್ನಿತರರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ವೈಯಕ್ತಿಕ ಕಾರಣಗಳ ನೆಪದಲ್ಲಿ ಶಿವಕುಮಾರ್, ವಿಚಾರಣೆಗೆ 2 ದಿನಗಳ ಕಾಲಾವಕಾಶ ನೀಡುವಂತೆ ಐಟಿ ಅಧಿಕಾರಿಗಳನ್ನು ಕೋರಿದ್ದಾರೆ. ಆದರೆ ಐಟಿ ಅಧಿಕಾರಿಗಳು ಸಮಯಾವಕಾಶ ನೀಡುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಶಿವಕುಮಾರ್ ಮತ್ತು ಜ್ಯೋತಿಷಿ ದ್ವಾರಕಾನಾಥ್ ಅವರಿಗೆ ಅಘೋಷಿತ ಆಸ್ತಿಯ ವಿಚಾರಣೆಗಾಗಿ ಐಟಿ ಅಧಿಕಾರಿಗಳು ಸಮನ್ಸ್‌ಗೊಳಿಸಿದ್ದು, ನಾಳೆಯೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ದ್ವಾರಕನಾಥ್ ನಾಳೆ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ ಎಂದು ಗೊತ್ತಾಗಿದೆ.

ಶಿವಕುಮಾರ್ ಮನೆಯಲ್ಲಿನ ದಾಳಿಯನ್ನು ಆ.5ರ ಬೆಳಗ್ಗೆ ಪೂರ್ಣಗೊಳಿಸಿದ್ದ ಐಟಿ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಅವುಗಳ ಪಂಚನಾಮೆ ಕಾರ್ಯದಲ್ಲಿ ತೊಡಗಿದ್ದು, ಜೊತೆಗೆ ಶಿವಕುಮಾರ್ ಅವರ ಆಪ್ತ ಸಚಿನ್ ನಾರಾಯಣ್, ಸಹೋದರ ಚೇತನ್ ನಾರಾಯಣ್ ಹಾಗೂ ಇತರೆ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.

ಆಘೋಷಿತ ಆಸ್ತಿ ಮತ್ತು ಹೂಡಿಕೆಗಳಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಪತ್ರಗಳನ್ನು ವಿಚಾರಣೆ ಸಂದರ್ಭದಲ್ಲಿ ಒದಗಿಸದಿದ್ದರೆ ಇಂಧನ ಸಚಿವ ಶಿವಕುಮಾರ್ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಮಧ್ಯೆ ಐಟಿ ಮಾಹಿತಿಯನ್ನು ಆಧರಿಸಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಸ್ಥೈರ್ಯ ತುಂಬಿದ ಮುಖಂಡರು: ಐಟಿ ದಾಳಿ ಹಿನ್ನೆಲೆಯಲ್ಲಿ ವಿಚಲಿತರಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದಲ್ಲಿ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ರಮೇಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಮೇಯರ್ ಪದ್ಮಾವತಿ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವು ಮುಖಂಡರು ಭೇಟಿ ನೀಡಿ ಧೈರ್ಯ ತುಂಬಿದರು.

ಡಾ.ಜಿ.ಪರಮೇಶ್ವರ್ ಅವರಿಗೆ, ಶಿವಕುಮಾರ್ ಪುಷ್ಪಾಗುಚ್ಚ ನೀಡಿ ಸ್ವಾಗತಿಸಿದರು. ಉಭಯ ಮುಖಂಡರು ಕೆಲಕಾಲ ಸಮಾಲೋಚನೆ ನಡೆಸಿದರು. ಅಲ್ಲದೆ, ಐಟಿ ದಾಳಿ ಮತ್ತು ಗುಜರಾತ್ ಶಾಸಕರ ವಾಸ್ತವ್ಯ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾತುಕಥೆ ನಡೆಸಿದರು.

ಶಿವಕುಮಾರ್ ಅವರ ತಾಯಿ ಗೌರಮ್ಮ ಅವರೂ ಆಗಮಿಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ಮನೆಯ ಹೊರಗೆ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಿವಕುಮಾರ್ ಬೆಂಬಲಿಗರು ಬೀಡುಬಿಟ್ಟಿದ್ದು, ಅವರ ಭೇಟಿಗಾಗಿ ಕಾತರದಿಂದ ಕಾಯುತ್ತಿದ್ದ ದೃಶ್ಯ ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News