ರಾಜ್ಯದಲ್ಲಿ ಇಂದು ರೈತರ ಸಾಲಮನ್ನಾ ಕುರಿತು ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಮಧು ಬಂಗಾರಪ್ಪ
ಚಿಕ್ಕಮಗಳೂರು, ಆ.6: ರಾಜ್ಯದಲ್ಲಿ ಇಂದಿನ ವಾತಾವರಣ ನೋಡಿದರೆ ರೈತರ ಸಾಲಮನ್ನಾ ಕುರಿತು ಮಾತನಾಡುವ ನೈತಿಕತೆ ಬಿಜೆಪಿಗರಿಗಿಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಅವರು ಭಾನುವಾರ ತಾಲೂಕಿನ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಅಂಬಳೆ ಹೋಬಳಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಯಡಿಯೂರಪ್ಪನವರೇ ಈಗಾಗಲೆ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದೆಯಲ್ಲ, ನೀವು ಕೇಂದ್ರಕ್ಕೆ ಒತ್ತಾಯಿಸಿ ರಾಜ್ಯದ ರೈತರ ಸಾಲಮನ್ನಾ ಮಾಡಿಸಿ ಎಂದು ಸವಾಲು ಎಸೆದರು.
ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರು ಸಿದ್ದರಾಮಯ್ಯನವರು ಬರಿ ಭಾಗ್ಯಗಳಲ್ಲಿ ಮುಳುಗಿದ್ದಾರೆ.ಆದರೆ ಜನರಿಗೆ ಯಾವ ಭಾಗ್ಯವೂ ಸಿಕ್ಕಿಲ್ಲ ರಾಜ್ಯದ ರೈತರ ಹಾಗೂ ಜನರ ಹಿತದೃಷ್ಟಿಯಿಂದ ಜೆಡಿಎಸ್ ಪಕ್ಷ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಮಳೆಇಲ್ಲದೆ ಬರಗಾಲದಿಂದ ಬೇಸತ್ತು ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯಾವ ಸರ್ಕಾರಗಳ ಕಣ್ಣಿಗೆ ಕಾಣಲಿಲ್ಲ ಎಂದು ನುಡಿದರು.
ಆಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮನೆ ಮನೆಗೆ ತೆರಳಿ 50 ಸಾವಿರ ರೂ.ಗಳ ಪರಿಹಾರ ನೀಡಿ ಸಂತೈಸಿ ರೈತರ ಕುಟುಂಬಕ್ಕೆ ಧೈರ್ಯ ತುಂಬಿದರು. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಜೆಡಿಎಸ್ ಪಕ್ಷ ನಡೆಯುತ್ತಿದ್ದು ಆರೋಗ್ಯ ಕೆಟ್ಟಂತ ಸಂದರ್ಭದಲ್ಲಿ ಮಧು ಪಕ್ಷಕ್ಕೆ ಬಂದು ಶಕ್ತಿ ತುಂಬಿದ್ದರು. ಹುಲಿ ಹೊಟ್ಟೆಯಲ್ಲಿ ಹುಲಿನೇ ಹುಟ್ಟೋದು ಜನರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ನೀವು ಘರ್ಜಿಸಿ ನಿಮ್ಮೊಂದಿಗೆ ನಮ್ಮ ಸಹಕಾರ ಸಂಪೂರ್ಣವಿರುತ್ತದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್, ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್ ಮಾತನಾಡಿದರು. ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿಈಶ್ವರ್, ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್, ಲೋಕಸಭಾ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್.ಮಂಜಪ್ಪ, ಯುವ ಜನತಾದಳದ ಅಧ್ಯಕ್ಷ ವಿನಯ್, ಜಿಪಂ ಸದಸ್ಯ ನಿಖಿಲ್ ಚಕ್ರವರ್ತಿ, ತಾಪಂ ಸದಸ್ಯರಾದ ಮಹೇಶ್, ಅರ್ಪಿತಾ ಪ್ರದೀಪ್, ಗಾಪಂ ಅಧ್ಯಕ್ಷೆ ಸುಮಾ ನಾಗೇಶ್, ಪಿಸಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಸವಿನಮನೆ ಭೈರೇಗೌಡ, ಹೋಬಳಿ ಅಧ್ಯಕ್ಷ ಹಾದಿಹಳ್ಳಿ ಪ್ರಸನ್ನ, ಹುಣಸೆಮಕ್ಕಿ ಲಕ್ಷ್ಮಣ್, ಹೆಚ್.ಎನ್.ಕೃಷ್ಣೇಗೌಡ, ಚಂದ್ರೇಗೌಡ, ವಿನಯ್‍ರಾಜ್, ಶಾಕೀರ್ ಹುಸೇನ್ ಮತ್ತಿತರರಿದ್ದರು.
‘ಬಿಜೆಪಿಯಲ್ಲಿ 16-17 ಮಂದಿ ಸಂಸದರಿದ್ದೀರಿ. ಕಳಸಾ ಬಂಡೂರಿ, ಮಹಾದಾಯಿ, ಕಾವೇರಿ ಸೇರಿದಂತೆ ಯಾವುದೆ ವಿಚಾರ ಬಂದಾಗ ನೀವು ಸಂಸತ್‍ನಲ್ಲಿ ಧ್ವನಿ ಎತ್ತೀದ್ದೀರಾ? ಈ ಮೂಲಕ ನಿಮ್ಮನ್ನು ನಂಬಿ ಆಯ್ಕೆ ಮಾಡಿದ ಜನರಿಗೆ ಮಲತಾಯಿ ಧೋರಣೆ ಮಾಡುತ್ತಿದ್ದೀರಿ ಎನ್ನಿಸುತ್ತಿಲ್ಲವೇ? ರಾಷ್ಟ್ರೀಯ ಪಕ್ಷಗಳ ನೀತಿ ಹೈಕಮಾಂಡ್‍ಗೆ ಸಮಾದಾನ ಪಡಿಸುವಂತದ್ದು ಹಾಗಾಗಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ’
ಮಧು ಬಂಗಾರಪ್ಪ, ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ.