ರಾಜ್ಯ ಮಟ್ಟದ ಬಾಲಕ ಮತ್ತು ಬಾಲಕಿಯರ ಬ್ಯಾಡ್ಮಿಂಟನ್ ಪಂದ್ಯಾವಳಿ

Update: 2017-08-06 13:17 GMT

ದಾವಣಗೆರೆ, ಆ. 6:  ಕ್ರೀಡಾಪಟುಗಳು ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶದಲ್ಲಿ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಿವಿಮಾತು ಹೇಳಿದರು.

ಇಲ್ಲಿನ ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಕರ್ನಾಟಕ ಬ್ಯಾಡ್ಮಿಂಟನ್ ಒಕ್ಕೂಟ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಬಾಲಕ ಮತ್ತು ಬಾಲಕಿಯರ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಪಟುಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತ್ತಿಗೊಳಿಸಿ ಸ್ಪರ್ಧೆಯಲ್ಲಿನ ಎದುರಾಳಿಯನ್ನು ಸೋಲಿಸಿ, ರಾಜ್ಯ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಬೇಕು. ಅಲ್ಲಿಯೂ ಜಯಶೀಲರಾಗಿ ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತರಬೇಕು ಎಂದ ಅವರು, ಜಿಲ್ಲೆಯಲ್ಲಿ ಅತ್ಯುತ್ತಮ ಕ್ರೀಡಾಪಟುಗಳಿದ್ದು, ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ರಾಷ್ಟ್ರಮಟ್ಟದ ಎಲ್ಲಾ ಕ್ರೀಡೆಗಳು ನಡೆಯುವಂತಾಗಲಿ ಎಂದು ಅವರು ಆಶಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 582 ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಆಗಮಿಸಿದ್ದಾರೆ. ಇದರಲ್ಲಿ ಅಂಡರ್ 13, 15 ಮತ್ತು 17 ಒಳಗೊಂಡ ಬಾಲಕ, ಬಾಲಕಿ ಕ್ರೀಡಾಪಟುಗಳು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಬ್ಯಾಡ್ಮಿಂಟನ್ ಪಂದ್ಯಾವಳಿ ಸರ್ವಿಸ್ ಪಾಯಿಂಟ್‍ನ ರೀತಿಯಲ್ಲಿ ಆಟವಾಡಿಸಲಾಗುತ್ತಿದ್ದು, ಜು. 7ರಂದು ಅಂಡರ್ 15 ಮತ್ತು ಜು. 8ರಂದು ಅಂಡರ್ 17 ಕ್ರೀಡಾಪಟುಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಮೂರು ಗುಂಪುಗಳಿಂದ ಪ್ರಥಮ ಹಾಗೂ ದ್ವಿತೀಯ ಸೇರಿ ಒಟ್ಟು 36 ವಿಜೇತರಿಗೆ 1 ಲಕ್ಷ ರು. ಬಹುಮಾನ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ಫೈನಲ್ ಪಂದ್ಯದಲ್ಲಿ ಗೆದ್ದಂತಹ ಕ್ರೀಡಾಪಟುವನ್ನು ರಾಷ್ಟ್ರಮಟ್ಟದಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ ಆಡುವುದಕ್ಕೆ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಪದಾಧಿಕಾರಿಗಳು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಅನಿತಾಬಾಯಿ ಮಾಲತೇಶ್, ಪಾಲಿಕೆ ಸದಸ್ಯ ದಿನೇಶ್ ಶೆಟ್ಟಿ, ತಿಪ್ಪಣ್ಣ, ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಎಂ. ಶಿವಕುಮಾರ್, ಶ್ರೀನಿವಾಸ್, ಉಮೇಶ್, ಪಿ.ಆರ್. ಮೋಹನ್ ಲಾಲ್, ರವಿಕುಮಾರ್ ಗಾಂಧಿ, ಲಕ್ಷ್ಮಿಗೌಡ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News