ಬಸ್-ಬೈಕ್ ನಡುವೆ ಅಪಘಾತ: ಇಬ್ಬರು ಮೃತ್ಯು
ಹನೂರು, ಆ. 6: ಖಾಸಗಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ - ಹಸನೂರು ಹೆದ್ದಾರಿಯ ಹುಣಸೇಪಾಳ್ಯ ಸಮೀಪ ನಡೆದಿದೆ.
ಕೊಯಮತ್ತೂರು ಪಟ್ಟಣದ ಸಂಜೀವ್ (25) ಮತ್ತು ಗೋವರ್ಧನ್(25) ಮೃತರು ಎಂದು ಗುರುತಿಸಲಾಗಿದ್ದು, ಅವರು ಕೊಯಮತ್ತೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಇಬ್ಬರೂ ತಮ್ಮ 10 ಸಹಪಾಠಿಗಳೊಂದಿಗೆ ಶನಿವಾರ ಬೆಳಗ್ಗೆ ಪ್ರವಾಸಕ್ಕೆ ಹೊರಟಿದ್ದರು. ಶನಿವಾರ ಸಂಜೆ ಬಣ್ಣಾರಿ ಮಾರಿಯಮ್ಮನ್ ದರ್ಶನ ಪಡೆದು ರಾತ್ರಿ ಅರೆಪಾಳ್ಯದ ಖಾಸಗಿ ರೆಸಾರ್ಟ್‌ವೊಂದರಲ್ಲಿ ತಂಗಿದ್ದರು. ರವಿವಾರ ಬೆಳಗ್ಗೆ ಒಡೆಯರಪಾಲ್ಯ ಸಮೀಪದ ಟಿಬೇಟಿಯನ್ ಬೌದ್ಧ ದೇಗುಲ ವೀಕ್ಷಣೆಗೆ ಆಗಮಿಸುತ್ತಿದ್ದ ವೇಳೆ ಬೆಳಗ್ಗೆ 8ಗಂಟೆಯ ಸುಮಾರಿಗೆ ಹುಣಸೇಪಾಳ್ಯ ಸಮೀಪ ಬಸ್ ನಡುವೆ ಅಪಘಾತ ಸಂಭವಿಸಿದೆ. ದ್ವಿ ಚಕ್ರ ವಾಹನ ಸವಾರ ಸಂಜೀವ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗೋವರ್ಧನ್ ಕೊಳ್ಳೇಗಾಲ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಸಂಬಂಧ ಹನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.