ಭೀಕರ ಅಪಘಾತ: ಮೂವರು ಮೃತ್ಯು, ಇಬ್ಬರಿಗೆ ಗಾಯ
ಮದ್ದೂರು, ಆ.6: ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಕೊಲ್ಲಿ ವೃತ್ತದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಕಾರು ಮತ್ತು ಟೆಂಪೋ ನಡುವೆ ಢಿಕ್ಕಿಯಾಗಿ, ಕಾರಿನಲ್ಲಿದ್ದ ಮೈಸೂರಿನ ಉದಯ ನಗರ ನಿವಾಸಿ ಶಕೀಲ್ ಅಹಮದ್(39), ಗಾಂಧಿನಗರದ ಮುಹಮ್ಮದ್ ಫಾರೂಕ್ (38) ಹಾಗು ಟೆಂಪೋದಲಿದ್ದ ಮಂಡ್ಯ ಜಿಲ್ಲೆಯ ಆಲದಕರೆ ಗ್ರಾಮದ ಸಾಗರ್(20) ಮೃತರು ಎಂದು ಗುರುತಿಸಲಾಗಿದೆ.
ಗಾಯಗೊಂಡಿರುವ ಸಾಕಿಬ್ ಹಾಗು ದಿಲೀಪ್ ಎಂಬುವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರಿನಿಂದ ಕಾರ್ಯನಿಮಿತ್ತ ಕಾರಿನಲ್ಲಿ ಐವರು ಬೆಂಗಳೂರಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಡಿವೈಡರ್ ಹಾರಿ ಎದುರಿನಿಂದ ಬರುತ್ತಿದ್ದ ಟೆಂಪೋಗೆ ಢಿಕ್ಕಿಯೊಡೆದು ಈ ಅಪಘಾತ ಸಂಭವಿಸಿದೆ.
ಶಕೀಲ್ ಅಹಮದ್, ಫಾರೂಕ್ ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡಿದ್ದ ಸಾಗರ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದರು. ಟೆಂಪೋಗೆ ಢಿಕ್ಕಿಯೊಡೆದ ಕಾರು ಮತ್ತೊಂದು ಕಾರಿಗೂ ಢಿಕ್ಕಿಯೊಡೆದಿದ್ದು, ಆ ಕಾರಿನಲ್ಲಿದ್ದ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.