ಗಿಡಮೂಲಿಕೆ ಬಳಕೆ ಮೂಲಕ ನಾನಾ ರೋಗಗಳಿಂದ ಮುಕ್ತಿ: ಶೇಷಪ್ಪ
ಹಾಸನ, ಆ.6: ವಿವಿಧ ಆಯುರ್ವೇದ ಗಿಡ ಮೂಲಿಕೆಯನ್ನು ಸಲಹೆಯೊಂದಿಗೆ ಬಳಕೆ ಮಾಡುವುದರ ಮೂಲಕ ನಾನಾ ರೋಗಗಳಿಂದ ದೂರ ಇರಬಹುದು ಎಂದು ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ ತಿಳಿಸಿದರು.
ನಗರದ ಎಂ.ಜಿ. ರಸ್ತೆಯಲ್ಲಿರುವ ಪಿಎಬ್ಲ್ಯೂಡಿ ಕಾಲನಿಯ ರಾಮಮಂದಿರದಲ್ಲಿ ವೇದಭಾರತೀ, ಪತಂಜಲಿ ಪರಿವಾರ ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಹರಿದ್ವಾರದ ಪತಂಜಲಿ ಪೀಠದ ಆಚಾರ್ಯ ಬಾಲಕೃಷ್ಣರವರ ಜನ್ಮ ದಿನ ಹಾಗೂ ಗಿಡ ಮೂಲಿಕೆಗಳ ದಿನಾಚರಣೆಯ ಅಂಗವಾಗಿ 21 ಗಿಡ ಮೂಲಿಕಗಳ ಪ್ರಯೋಜನವನ್ನು ವಿವರಿಸುತ್ತಾ, ಅಮೃತ ಬಳ್ಳಿ, ಅಲೋವೆರಾ, ದಾಳಿಂಬೆ, ಸಿಬೆಎಲೆ, ಪಪಾಯಿ, ಬೇವು, ಚಕ್ರಮುನಿ, ನುಗ್ಗೆ ಸೊಪ್ಪು,, ಶುಂಠಿ, ದೊಡ್ಡಪತ್ರೆ, ಕಾಮ ಕಸ್ತೂರಿ, ಬಸ್ಲೆ, ನೆಲಾನಲ್ಲಿ, ಕರಿಬೇವು, ಗಣಿಕೆ ಸೊಪ್ಪು, ತುಂಬೆ, ಆಗಲಕಾಯಿ, ಕಬ್ಬು, ಮುಟರ ಮುನಿ ಬಳಸುವುದರಿಂದ ಡಯಾಬಿಟಿಸ್, ಕಿಡ್ನಿಗೆ ಸಂಬಂಧಿಸಿದ ಖಾಯಿಲೆ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗೆ, ಪೈಲ್ಸ್ ಮತ್ತು ಫಲ್ಸ್ ಇತರೆ ನಾನಾ ಖಾಯಿಲೆಗೆ ಗಿಡಮೂಲಿಕೆಗಳಿಂದ ಔಷಧಿ ಪಡೆಯುವ ವಿಧಾನವನ್ನು ಪರಿಚಯಿಸಿದರು.
ಮನುಷ್ಯನಿಗೆ ಎಷ್ಟೆ ಆಸ್ತಿ ಮತ್ತು ಸಂಪತ್ತು ಇದ್ದರೂ ಪ್ರಯೋಜನವಿಲ್ಲ. ಮೊದಲು ಅವರ ಆರೋಗ್ಯ ಉತ್ತಮವಾಗಿದ್ದರೇ ಎಲ್ಲಾ ಪ್ರಯೋಜನವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕಾಳಜಿ ವಹಿಸಿ ತಮ್ಮ ತಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದ ಇರಬೇಕು. ಪ್ರಸ್ತುತದಲ್ಲಿನ ವಾತಾವರಣದಲ್ಲಿ ಮನುಷ್ಯನ ಆರೋಗ್ಯ ದಿನೆದಿನೆ ಕುಸಿಯುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು. ಪ್ರಕೃತಿಯಿಂದ ದೊರಕುವ ಗಿಡ ಮೂಲಿಕೆಗಳು ಮನುಷ್ಯನ ಖಾಯಿಲೆಗೆ ಉತ್ತಮವಾಗಿದೆ. ಸಲಹೆಯೊಂದಿಗೆ ಇದರ ಸದ್ಬಳಿಕೆಯನ್ನು ಮಾಡಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಜ್ವಾಪನವಾಗಿ ಇಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು. ಯಾವುದೇ ಔಷದಿ ಸೇವನೆ ಮಾಡದೆ ಗಿಡಮೂಲಿಕೆ ಬಳಕೆ ಮಾಡುವ ಮೂಲಕ ಮನುಷ್ಯನ ದೇಹವನ್ನು ಉತ್ತಮ ಆರೋಗ್ಯದಲ್ಲಿ ಇಟ್ಟುಕೊಳ್ಳಬಹುದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯೋಗ ಸಾಧಕರ ಸಹಕಾರದೊಡನೆ ಗಿಡಮೂಲಿಕೆಯ ಬಗ್ಗೆ ಅರಿವು ನೀಡಿ ಬಳಸುವ ವಿಧಾನವನ್ನು ಹೇಳಿಕೊಟ್ಟರು. ಸ್ಥಳದಲ್ಲಿ ಇಡಲಾಗಿದ್ದ ಗಿಡಮೂಲಿಕೆಯ ಪ್ರಯೋಜನವನ್ನು ಪ್ರತ್ಯೇಕ್ಷವಾಗಿ ತಿಳಿಯಪಡಿಸಿದರು. ಭಾಗವಹಿಸಿದ್ದವರಿಗೆ ಯೋಗ ಕೂಡ ಪ್ರದರ್ಶಿಸಿದರು. ಶ್ರೀ ರಾಮಮಂದಿರ ಅರ್ಚಕರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಿದರು. ನಂತರ ಸಾಮರಸ್ಯ ಯಜ್ಞವನ್ನು ವೇದಭಾರತೀಯಿಂದ ನಡೆಸಿಕೊಟ್ಟರು.
ಇದೆ ವೇಳೆ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಹರಿಹರಪುರ ಶ್ರೀಧರ್, ಸುರೇಶ್ ಪ್ರಜಾಪತಿ, ದಯಾನಂದ್, ವೇಧಭಾರತೀಯ ಅಶೋಕ್, ಮಹಿಳಾ ಪ್ರಭಾರಿ ಹೇಮಲತ, ಸಹ ಪ್ರಭಾರಿ ಕಲಾವತಿ, ರಾಜೇಶ್, ನಂದಕುಮಾರ್, ದೊರೆಸ್ವಾಮಿ, ಮಂಜುನಾಥ್, ಗಿರೀಶ್, ಚಂದ್ರಕಲಾ, ರುಕ್ಮಿಣಿ ಇತರರು ಪಾಲ್ಗೊಂಡಿದ್ದರು.