ಸ್ಪರ್ದಾತ್ಮಕ ಯುಗದಲ್ಲಿ ಕನ್ನಡದ ಜೊತೆ ಇಂಗ್ಲಿಷ್ ಭಾಷೆಯು ಇರಲಿ: ಹೆಚ್.ಎಲ್. ನಾಗರಾಜು

Update: 2017-08-06 15:30 GMT

ಹಾಸನ, ಆ. 6: ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಕನ್ನಡದ ಜೊತೆ ಆಂಗ್ಲ ಭಾಷೆಯು ಅವಶ್ಯಕವಾಗಿದೆ ಎಂದು ಹಾಸನ ಉಪವಿಬಾಗಧೀಕಾರಿ ಹೆಚ್.ಎಲ್. ನಾಗರಾಜು ಕರೆ ನೀಡಿದರು.

ನಗರದ ಸ್ಲೇಟರ್ಸ್‌ಹಾಲ್ ವೃತ್ತ, ಶ್ರೀ ಗಂಧದ ಕೋಠಿ ಆವರಣದಲ್ಲಿರುವ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು (ಪ್ರಧಾನ)ದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಗ್ರಾಮರ್ ಹಾಗೂ ಸ್ಪೋಕನ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಉತ್ತಮ ಜೀವನ ಮಾಡಲು ಕನ್ನಡ ಭಾಷೆ ಜೊತೆಯಲ್ಲೆ ಇಂಗ್ಲಿಷ್ ಭಾಷೆ ಕಲಿಕೆ ಮಾಡಬೇಕು. ಹಿಂದೆ ಇಂತಹ ಅವಕಾಶಗಳು ಕಡಿಮೆ ಇದ್ದವು, ಇಂದಿನ ದಿನಗಳಲ್ಲಿ ಮಕ್ಕಳಿಗೆ ಒಳ್ಳೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಕಿವಿಮಾತು ಹೇಳಿದರು.

ಇಂದಿನ ಪ್ರತಿಯೊಂದು ಹಂತದಲ್ಲೂ ಸ್ಪರ್ದೆ ಎಂಬುದನ್ನು ವಿದ್ಯಾರ್ಥಿಗಳು ಎದುರಿಸಬೇಕು. ಆ ನಿಟ್ಟಿನಲ್ಲಿ ಸಾಧನೆ ಮಾಡಬೇಕಾದರೇ ಆಂಗ್ಲ ಭಾಷೆ ಅವಶ್ಯಕವಾಗಿದೆ. ದೂರದೃಷ್ಠಿ ಎಂಬುದು ಇದ್ದರೇ ಮುಂದಿನ ಭವಿಷ್ಯವನ್ನು ಸುಗಮವಾಗಿ ಎದುರಿಸಬಹುದು ಎಂದು ಸಲಹೆ ನೀಡಿದರು. ಇಂದಿನಿಂದ 24 ರವಿವಾರಗಳು ಇಂತಹ ತರಗತಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಇಂಗ್ಲಿಷ್ ಭಾಷೆ ಉಪನ್ಯಾಸಕಿ ಸಯ್ಯಾದ್ ಆಯುಷ ಸಿದ್ದಿಕರ್ ಮಾತನಾಡಿ, ಶಿಕ್ಷಣದಲ್ಲಿ ಶಿಸ್ತು, ಶ್ರದ್ಧೆ, ಗುರಿ ಇದ್ದರೇ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಬಹುದು. ಜೊತೆಯಲ್ಲಿ ಇಂಗ್ಲಿಷ್ ಭಾಷೆ ಕಲಿಕೆ ಕೂಡ ಇರುವುದು ಸವಶ್ಯಕ ಎಂದರು. ಗ್ರಾಮರ್ ಕಲಿಕೆ ಇಲ್ಲವಾದರೇ ಭಾಷೆಯಲ್ಲಿ ಗೊಂದಲಗಳು ನಿಮ್ಮನ್ನು ಕಾಡುತ್ತದೆ ಎಂದು ತಿಳಿಸಿದರು.

ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು (ವಿಭಜಿತ), ವಾಣಿ ವಿಲಾಸ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ರವಿವಾರ ಏಕಕಾಲದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಗ್ರಾಮರ್ ಹಾಗೂ ಸ್ಪೋಕನ್ ತರಬೇತಿಯನ್ನು ಪ್ರಾರಂಭಿಸಲಾಗಿದೆ.

ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯದೇವಯ್ಯ, ವಿಭಜಿತ ಕಾಲೇಜು ಪ್ರಾಂಶುಪಾಲ ಕೆ.ಪಿ. ಸುರೇಶ್, ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು (ಪ್ರಧಾನ) ಪ್ರಭಾರಿ ಪ್ರಾಂಶುಪಾಲ ಹೇಮಲತಾ ಇತರರು ಇದ್ದರು. ಹಿರಿಯ ಕಾಲೇಜು ಉಪನ್ಯಾಸಕ ತಿಮ್ಮೇಗೌಡ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿ ಚಂದನ ಮತ್ತು ಸಂಗಡಿಗರು ನಾಡಗೀತೆ ಮತ್ತು ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News