ಅಪರಿಚಿತ ವಾಹನ ಢಿಕ್ಕಿ: ಪೊಲೀಸ್ ಪೇದೆ ಸಾವು
Update: 2017-08-07 18:17 IST
ಶಿವಮೊಗ್ಗ, ಆ. 7: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ಕೆ.ಎಸ್.ಆರ್.ಪಿ. ಪಡೆಯ ಪೊಲೀಸ್ ಪೇದೆಯೋರ್ವರು ಮೃತಪಟ್ಟಿರುವ ಘಟನೆ ನಗರದ ಶಂಕರಮಠ ರಸ್ತೆಯಲ್ಲಿ ಸೋಮವಾರ ಮುಂಜಾನೆ ವರದಿಯಾಗಿದೆ.
ಬೀರಪ್ಪ (35) ಮೃತಪಟ್ಟ ಪೊಲೀಸ್ ಪೇದೆ ಎಂದು ಗುರುತಿಸಲಾಗಿದೆ. ಇವರು ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲೂಕಿನ ಮಾದನಬಾವಿ ಗ್ರಾಮದ ನಿವಾಸಿಯಾಗಿದ್ದು, ನಗರದ ಹೊರವಲಯ ಮಾಚೇನಹಳ್ಳಿಯಲ್ಲಿರುವ ಕೆ.ಎಸ್.ಆರ್.ಪಿ. ತುಕಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಮುಂಜಾನೆ ಬೈಕ್‌ನಲ್ಲಿ ಕರ್ತವ್ಯಕ್ಕೆಂದು ಮಾದನಬಾವಿಯಿಂದ ಮಾಚೇನಹಳ್ಳಿಗೆ ಆಗಮಿಸುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಅಸುನೀಗಿದ್ದಾರೆ.
ಈ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.