ಕೆರೆಗೆ ಗಾರ್ಮೆಂಟ್ಸ್‌ನ ರಾಸಾಯನಿಕ ಮಿಶ್ರಿತ ನೀರು: ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ, ಆ. 7: ನಗರದ ಮಾಚೇನಹಳ್ಳಿಯಲ್ಲಿರುವ ಶಾಹಿ ಗಾರ್ಮೆಂಟ್ಸ್‌ನಿಂದ ನಿದಿ ಗ್ರಾಮದ ಹುಚ್ಚಣಿಗೆ ಕೆರೆಗೆ ರಾಸಾಯನಿಕ ಕಲುಷಿತ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಗಾರ್ಮೆಂಟ್ಸ್ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ನಿದಿಗೆ ಗ್ರಾಮದ ಹುಚ್ಚಣ್ಣಿ ಕೆರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಸುತ್ತಮುತ್ತಲಿನ ಗ್ರಾಮಗಳ ನೂರಾರು ಎಕರೆಗೂ ಅಧಿಕ ಪ್ರದೇಶದ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿದೆ. ನಾನಾ ರೀತಿಯಲ್ಲಿ ಜನ - ಜಾನುವಾರುಗಳಿಗೆ ಈ ಕೆರೆ ಸಹಕಾರಿಯಾಗುತ್ತಾ ಬಂದಿದೆ
ಆದರೆ ಕೆಲ ವರ್ಷಗಳ ಹಿಂದೆ ಈ ಕೆರೆಯ ಸಮೀಪ ಆರಂಭವಾದ ಶಾಹಿ ಗಾರ್ಮೆಂಟ್ಸ್ ಕಂಪೆನಿಯು, ಕಾನೂನುಬಾಹಿರವಾಗಿ ರಾಸಾಯನಿಕಯುಕ್ತ ಕಲುಷಿತ ನೀರನ್ನು ಕೆರೆಗೆ ಬಿಡುಗಡೆ ಮಾಡುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ಕೆರೆಯ ನೀರು ವಿಷಯುಕ್ತವಾಗಿ ಪರಿಣಮಿಸುತ್ತಿದೆ. ಈ ನೀರು ಪೂರೈಕೆ ಮಾಡಲಾಗುವ ಗದ್ದೆಗಳಲ್ಲಿ ಸಮರ್ಪಕವಾಗಿ ಬೆಳೆ ಬರುತ್ತಿಲ್ಲ. ರೈತರು ಬೆಳೆ ನಷ್ಟಕ್ಕೀಡಾಗುತ್ತಿದ್ದಾರೆ.
ಹಾಗೆಯೇ ಈ ನೀರು ಕುಡಿಯುವ ಜಾನುವಾರುಗಳು, ಪಶುಪಕ್ಷಿಗಳು, ಕೆರೆಯಲ್ಲಿರುವ ಜಲಚರಗಳು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಕೆರೆಗೆ ಮಲಿನಯುಕ್ತ ಪೂರೈಕೆಯಾಗದಂತೆ ಎಚ್ಚರವಹಿಸಬೇಕು.ಕೆರೆ ನೀರು ಕಲುಷಿತಗೊಳಿಸುತ್ತಿರುವ ಶಾಹಿ ಗಾರ್ಮೆಂಟ್ಸ್ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಗೋ. ರಮೇಶ್‌ಗೌಡ, ಪಲ್ಲವಿ, ಲಕ್ಷ್ಮಣ್, ಖಾಸಿಂ, ನಾಗರಾಜ್ ಭೋವಿ, ಸಂತೋಷ್, ಮುರುಳಿ, ರಂಗಸ್ವಾಮಿ, ಪುನೀತ್ ಸೇರಿದಂತೆ ಮೊದಲಾದವರಿದ್ದರು.