ಜಿಲ್ಲೆಗೆ ನೀರು ಹರಿಸದಿದ್ದರೆ ಸಿ.ಎಂ.ಗೆ ಕಪ್ಪು ಬಾವುಟ ಪ್ರದರ್ಶನ
ತುಮಕೂರು, ಆ.7: ಆಗಸ್ಟ್ 17ರಂದು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಿಲ್ಲೆಗೆ ಹೇಮಾವತಿ ನೀರು ಹರಿಸಿ ನಂತರ ತುಮಕೂರಿಗೆ ಬರಲಿ, ಇಲ್ಲದಿದ್ದರೆ ಮುಖ್ಯಮಂತ್ರಿಗಳಿಗೆ ಕಪ್ಪುಬಾವುಟ ಪ್ರದರ್ಶಿಸುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ನೀರಿಗಾಗಿ ತುಮಕೂರಿನಲ್ಲಿ ವಿವಿಧ ರೀತಿಯ ಹೋರಾಟಗಳು ನಡೆಯುತ್ತಿದ್ದರೂ ಸರಕಾರ ಕಿವಿಗೊಡುತ್ತಿಲ್ಲ. ಆದರೆ ಹೆಚ್.ಡಿ.ದೇವೇಗೌಡ ಒಂದು ದಿನ ಧರಣಿ ನಡೆಸಿದ್ದಕ್ಕೆ ಬಲಮೇಲ್ದಂಡೆ ನಾಲೆಗೆ ಒಂದು ಟಿ.ಎಂ.ಸಿ ನೀರು ಹರಿಸಲಾಗುತ್ತಿದೆ. ಇಷ್ಟಾದರೂ ಜಿಲ್ಲೆಯ ಯಾವೊಬ್ಬ ಶಾಸಕರು ಬಾಯಿ ಬಿಡುತ್ತಿಲ್ಲ. ನಿಜಕ್ಕೂ ಇದು ಬೇಸರದ ಸಂಗತಿ ಎಂದರು.
ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಲು ಕ್ರಮಕೈಗೊಳ್ಳದೆ ಮುಖ್ಯಮಂತ್ರಿಗಳಿಗೆ ಜಿಲ್ಲೆಗೆ ಬರುವ ಯಾವುದೇ ನೈತಿಕತೆ ಇಲ್ಲ. ಕೂಡಲೇ ತುಮಕೂರು ಜಿಲ್ಲೆ ಹಾಗೂ ನಗರಕ್ಕೆ ಕುಡಿಯಲು ನೀರು ಒದಗಿಸಿ ನಂತರ ಜಿಲ್ಲೆಗೆ ಬನ್ನಿ ಇಲ್ಲವಾದರೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ಕುಡಿಯುವ ನೀರಿನ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಸತ್ತು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನೀರು ಹರಿಸುವಂತೆ ಧರಣಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಒಂದು ಟಿಎಂಸಿ ನೀರು ಹರಿಸುವಂತೆ ಸೂಚನೆ ನೀಡಿದ್ದರು. ಅದೇ ರೀತಿ ನಮ್ಮ ಜಿಲ್ಲೆಗೂ ನೀರು ಹರಿಸಬೇಕು ಎಂದ ಅವರು, ಈಗಾಗಲೇ ಜಲಾಶಯದಲ್ಲಿ 17 ಟಿಎಂಸಿ ನೀರು ಸಂಗ್ರಹವಾಗಿದೆ. ಅದರಲ್ಲಿ ಒಂದು ಟಿಎಂಸಿ ಬಲದಂಡೆಗೆ, 2 ಟಿಎಂಸಿ ಕಾವೇರಿ ಕೊಳ್ಳಕ್ಕೆ, ಒಂದು ಟಿಎಂಸಿ ತಮಿಳುನಾಡಿಗೆ ನೀರು ಹರಿಯುತ್ತಿದೆ ಹಾಗೂ 5 ಟಿಎಂಸಿ ಡೆಡ್ ಸ್ಟೋರೆಜ್‌ನಲ್ಲಿದ್ದರೆ ಇನ್ನುಳಿದ 8 ಟಿಎಂಸಿ ನೀರನ್ನು ಎಲ್ಲಿಗೆ ಹರಿಸುತ್ತೀರಿ ಎಂದು ಪ್ರಶ್ನಿಸಿದ ಅವರು, ಡ್ಯಾಂ ನಲ್ಲಿ ಸಂಪೂರ್ಣ ನೀರು ಖಾಲಿಯಾದ ಮೇಲೆ ಮಾತನಾಡಿ ಪ್ರಯೋಜನವಿಲ್ಲ. ಹಾಗಾಗಿ ಜನರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್,ಗೋಪಾಲಕೃಷ್ಣ ,ಪ್ರಕಾಶ್, ಕೆ.ಪಿ.ಮಹೇಶ್, ಬಸವರಾಜ್, ಶಬ್ಬೀರ್ ಅಹಮ್ಮದ್, ಮಂಜುನಾಥ್ ಮತ್ತಿತರರು ಹಾಜರಿದ್ದರು.