ಕಸ ವಿಲೇವಾರಿಗೆ ಬರಡಿ ಗ್ರಾಮಸ್ಥರ ವಿರೋಧ
ಮಡಿಕೇರಿ, ಆ.7 : ಬರಡಿ ಗ್ರಾಮದ ಜನವಸತಿಯ ಪ್ರದೇಶದ ಸಮೀಪದಲ್ಲೆ ಕಂದಾಯ ಇಲಾಖೆ ಗುರುತಿಸಿರುವ ಜಾಗದಲ್ಲಿ ನೆಲ್ಯಹುದಿಕೇರಿ ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿಗೆ ಮುಂದಾಗಿರುವುದನ್ನು ತೀವ್ರವಾಗಿ ವಿರೋಧಿಸಿರುವ ಪಂಚಾಯತ್ 1 ಮತ್ತು 2ನೇ ವಾರ್ಡ್ ನಿವಾಸಿಗಳು, ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ ಸದಸ್ಯರಾದ ವಿ.ಜಿ. ಯೋಗೇಶ್, ಬರಡಿ ಗ್ರಾಮದ 1 ಮತ್ತು 2ನೇ ವಾರ್ಡ್ ಹಾಗೂ ಗಿರಿಜನ ಕಾಲೋನಿಯ ಸಮೀಪದಲ್ಲೆ ನೆಲ್ಯಹುದಿಕೇರಿಯ ತ್ಯಾಜ್ಯ ವಿಲೇವಾರಿಗೆ ಕಂದಾಯ ಇಲಾಖೆ 80 ಸೆಂಟ್ ಜಾಗವನ್ನು ಗುರುತಿಸಿದೆ ಮತ್ತು ಈ ಜಾಗದಲ್ಲಿ ಕಸ ವಿಲೆೇವಾರಿಯ ಪ್ರಯತ್ನಗಳು ನಡೆಯುತ್ತಿದೆ. ಜನವಸತಿಯ ಬಳಿಯಲ್ಲೆ ತ್ಯಾಜ್ಯ ವಿಲೇವಾರಿಯಿಂದ ರೋಗ ರುಜಿನಗಳು ಹರಡುವ ಆತಂಕವಿದೆ. ಆದ್ದರಿಂದ ಜಿಲ್ಲಾಡಳಿತ ಮುಂದಿನ ಹತ್ತು ದಿನಗಳ ಒಳಗಾಗಿ ಈ ನಿರ್ಧಾರವನ್ನು ಬದಲಾಯಿಸಬೇಕು. ತಪ್ಪಿದಲ್ಲಿ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆಯನ್ನು ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ನೆಲ್ಯಹುದಿಕೇರಿ ಪಟ್ಟಣದ 5 ಮತ್ತು 6ನೇ ವಾರ್ಡ್‌ಗಳಿಗೆ ಸಂಬಂಧಿಸಿದ ತ್ಯಾಜ್ಯವನ್ನು ಇದೀಗ ಬರಡಿಯಲ್ಲಿ ವಿಲೇವಾರಿ ಮಾಡುವ ಪ್ರಯತ್ನ ನಡೆಯುತ್ತಿದೆ. ಗ್ರಾಮ ವ್ಯಾಪ್ತಿಯಲ್ಲಿ ಹತ್ತಾರು ಏಕರೆ ಪೈಸಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಪ್ರಕರಣಗಳಿದ್ದು, ಇಂತಹ ಜಾಗವನ್ನು ತೆರವುಗೊಳಿಸಿ ತ್ಯಾಜ್ಯ ವಿಲೆೇವಾರಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದೀಗ ತ್ಯಾಜ್ಯ ವಿಲೇವಾರಿಗೆ ಗುರುತಿಸಿರುವ ಜಾಗದ ಪಕ್ಕದಲ್ಲೆ ಗ್ರಾಮ ಪಂಚಾಯ್ತಿಯ ಸಾರ್ವಜನಿಕ ಕೊಳವೆ ಬಾವಿ ಮತ್ತು ಕೆರೆ ಇದೆ. ಇದರೊಂದಿಗೆ ನೈಸರ್ಗಿಕವಾಗಿ ನೀರಿನ ಹರಿವು ಹಾಗೂ 15 ಮೀಟರ್ ಅಂತರದಲ್ಲೆ ಜನವಸತಿಯೂ ಇದೆ. ಇಂತಹ ಪ್ರದೇಶದಲ್ಲಿ ತ್ಯಾಜ್ಯ ವಿಲೆೇವಾರಿ ಮಾಡಿದಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುವುದರೊಂದಿಗೆ ಅಲ್ಲಿನ ನಿವಾಸಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುವುದೆಂದು ಹೇಳಿದ್ದಾರೆ. ಯಾವುದೇ ರೀತಿಯ ಕಸ ವಿಲೇವಾರಿಗೂ ಬರಡಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಅವಕಾಶ ನೀಡುವುದಿಲ್ಲವೆಂದು ತಿಳಿಸಿದ ವಿ.ಜಿ.ಲೋಕೇಶ್, ಪರ್ಯಾಯ ಜಾಗ ಗುರುತಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥರಾದ ಶಾಂತಮ್ಮ ಮಾತನಾಡಿ, ಬರಡಿಯ 1 ಮತ್ತು 2ನೇ ವಾರ್ಡ್‌ನಲ್ಲಿ 120ಕ್ಕೂ ಹೆಚ್ಚಿನ ಮನೆಗಳಿದ್ದು, ಪ್ರಸ್ತುತ ಈ ಮನೆಗಳ ಸಮೀಪ ಗುರುತಿಸಿರುವ ಜಾಗದಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡುವುದಿಲ್ಲವೆಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಸೈದಲವಿ, ಸಂತೋಷ್, ಲೀಲಾ ಶಿವಪ್ಪ, ಶಾಂತಮ್ಮ ಹಾಗೂ ಮಣಿ ಟಿ.ಆರ್. ಉಪಸ್ಥಿತರಿದ್ದರು.