×
Ad

ಭೂಮಿಯ ಹಕ್ಕು ನೀಡಲು ಕಲ್ತೋಡು ನಿವಾಸಿಗಳ ಒತ್ತಾಯ

Update: 2017-08-07 18:44 IST

ಮಡಿಕೇರಿ, ಆ.7 : ತಿತಿಮತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೋಕ್ಯ ಗ್ರಾಮದ ಕಲ್ತೋಡು ಪೈಸಾರಿ ಕಾಲೋನಿಯ ಕುಟುಂಬಗಳಿಗೆ ತಲಾ ಒಂದು ಏಕರೆ ಭೂಮಿಯನ್ನು ಹಂಚಿಕೆ ಮಾಡಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರಾದ ಮುತ್ತ, ಕಲ್ತೋಡು ವ್ಯಾಪ್ತಿಯಲ್ಲಿ ತಲೆ ತಲಾಂತರಗಳಿಂದ ವಾಸಿಸುತ್ತಿರುವ ನಿವಾಸಿಗಳ ಹಿರಿಯರು ಹೊಂದಿದ್ದ ತಲಾ ಒಂದು ಏಕರೆಗೂ ಅಧಿಕ ಭೂಮಿಯನ್ನು ಕೆಲವು ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದೀಗ ನಿವಾಸಿಗಳ ಬಳಿ ಕೆಲವೇ ಸೆಂಟ್‌ಗಳಷ್ಟು ಜಾಗವಿದ್ದು, ಸಂಕಷ್ಟದ ಜೀವನ ನಡೆಸುತ್ತಿರುವ ಇವರಿಗೆ ತಲಾ ಒಂದು ಏಕರೆ ಭೂಮಿಯನ್ನು ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಪ್ರದೇಶವನ್ನು ಸರ್ವೇ ಮಾಡಿಸಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿ ಹತ್ತು ಕುಟುಂಬಗಳಿಗೆ ಸೇರಬೇಕಾದ ಭೂಮಿಯನ್ನು ಮರಳಿ ನೀಡಬೇಕೆಂದು ಅವರು ಹೇಳಿದರು. ತಿತಿಮತಿ ಗ್ರಾಮ ಪಂಚಾಯ್ತಿ ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯ್ತಿಗೆ ಕಳೆೆದ 3 ವರ್ಷಗಳಿಂದ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಅಲ್ಲದೆ, ಒತ್ತುವರಿ ಜಾಗದ ಬಗ್ಗೆ ಪಂಚಾಯ್ತಿಯ ಗಮನ ಸೆಳೆೆಯಲಾಗಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರಕಿಲ್ಲವೆಂದು ಮುತ್ತ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಹಕ್ಕನ್ನು ಕೇಳಲು ಹೋದರೆ ಪಂಚಾಯ್ತಿಯಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ತೋಟಗಳಲ್ಲಿ ಕೂಲಿಕಾರ್ಮಿಕರಾಗಿ ದುಡಿಯುತ್ತಿರುವ ನಮಗೆ ಸೂಕ್ತ ಭೂಮಿ ಮತ್ತು ವಸತಿ ಅಗತ್ಯವಿದೆ. ಜಿಲ್ಲಾಡಳಿತ ತಕ್ಷಣ ಕಲ್ತೋಡು ಗ್ರಾಮಕ್ಕೆ ಭೇಟಿ ನೀಡಿ ನೈಜಾಂಶವನ್ನು ಅರಿತು ಬಡವರಿಗೆ ಭೂಮಿ ಒದಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜಾ, ಗಣೇಶ್, ಚಾತ, ದಿಣೇಶ ಹಾಗೂ ಸೋಮ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News