×
Ad

ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ನಿಂತ ಒಕ್ಕಲಿಗರ ಸಂಘ

Update: 2017-08-07 18:53 IST

ಬೆಂಗಳೂರು, ಆ. 7: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯದಲ್ಲಿ ಮೂಲೆಗುಂಪು ಮಾಡುವ ದುರುದ್ದೇಶದಿಂದ ಕೇಂದ್ರ ಸರಕಾರ ಐಟಿ ದಾಳಿ ಮಾಡಿಸಿದೆ, ಇದರ ಹಿಂದೆ ರಾಜಕೀಯ ಪಿತೂರಿ ಅಡಗಿದೆ ಎಂದು ಒಕ್ಕಲಿಗರ ಸಂಘ ಆರೋಪಿಸಿದೆ.

ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಸಿ ಸೋಮವಾರ ನಗರದ ಒಕ್ಕಲಿಗರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬೆಟ್ಟೇಗೌಡ ಮಾತನಾಡಿ, ನಮ್ಮ ಜನಾಂಗದ ಮುಖಂಡರ ಮೇಲೆ ಐಟಿ ದಾಳಿ ದುರುದ್ದೇಶ. ನಮ್ಮ ಜನಾಂಗದ ನಾಯಕನ ಬೆಳವಣಿಗೆಯನ್ನು ಸಹಿಸದೆ ರಾಜಕೀಯ ಪಿತೂರಿಯಿಂದ ಐಟಿ ದಾಳಿ ಮಾಡಲಾಗಿದೆ ಎಂದು ಕಿಡಿಕಾರಿದರು.

ಐಟಿ ಇಲಾಖೆ ಕೇಂದ್ರ ಸರಕಾರದ ಕಪಿಮುಷ್ಟಿಯಲ್ಲಿದೆ. ಕೇವಲ ನಮ್ಮ ಜನಾಂಗ ಮಾತ್ರವಲ್ಲ, ಇಡೀ ರಾಜ್ಯದ ಜನರಿಗೆ ಐಟಿ ದಾಳಿ ಬಗ್ಗೆ ಆಕ್ಷೇಪವಿದೆ. ನಮ್ಮ ಸಮುದಾಯದ ಧೀಮಂತ ನಾಯಕನ ರಾಜಕೀಯ ಬೆಳವಣಿಗೆ ಸಹಿಸದವರ ಕುತಂತ್ರವಿದು ಎಂದು ಹರಿಹಾಯ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಐಟಿ ದಾಳಿ ರಾಜಕೀಯ ಪ್ರೇರಿತವಾದ್ದು. ಸತತ 72 ಘಂಟೆಗಳ ವಿಶ್ರಾಂತಿ ನೀಡದೆ ಡಿ.ಕೆ.ಶಿವಕುಮಾರ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು ಸರಿಯಲ್ಲ. ತಪ್ಪಿದ್ದರೆ ಕಾನೂನು ರೀತಿ ದಾಳಿ ಮಾಡಲಿ. ಆದರೆ ದಾಳಿಯ ವೇಳೆ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಬಳಸಿಕೊಂಡಿದ್ದು ಸಂವಿಧಾನಬಾಹಿರ ಎಂದು ಆರೋಪಿಸಿದರು.

ಐಟಿ ದಾಳಿಯ ವೇಳೆ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್‌ರನ್ನು ಒಳಗೆ ಬಿಡದೆ ಸತಾಯಿಸಿದ್ದಾರೆ. ಮಾಧ್ಯಮಗಳಲ್ಲಿ ಕಂತೆ ಕಂತೆ ನೋಟುಗಳ ಗೋಪುರವನ್ನು ತೋರಿಸಿದ ದೃಶ್ಯಾವಳಿಯಲ್ಲಿ ಯಾವುದೇ ಸತ್ಯವಿಲ್ಲ. ಈ ಪ್ರವೃತ್ತಿ ಮರುಕಳಿಸಿದರೆ ಅಂತಹ ಮಾಧ್ಯಮಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಸಂಘದ ಖಜಾಂಚಿ ಕಾಳೇಗೌಡ, ನಿರ್ದೇಶಕ ಕೃಷ್ಞಮೂರ್ತಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News