ಮಲೇಶಿಯಾದಿಂದ ಮರಳು ಆಮದು: ಕಾನೂನು ಸಚಿವ ಜಯಚಂದ್ರ
ಬೆಂಗಳೂರು, ಆ. 7: ರಾಜ್ಯದಲ್ಲಿ ಮರಳು ಕೊರತೆ ತಪ್ಪಿಸಲು ಮಲೇಶಿಯಾದಿಂದ ಮರಳು ಆಮದು ಮಾಡಿಕೊಳ್ಳಲು ಟೆಂಡರ್ ಅಂತಿಮಗೊಳಿಸಲಾಗಿದ್ದು, ಪ್ರತಿಟನ್‌ಗೆ 3,500 ರೂ.ನಂತೆ ಜನಸಾಮಾನ್ಯರಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮನೆ-ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಪಡಿತರ ವಿತರಣಾ ವ್ಯವಸ್ಥೆ ರೀತಿಯಲ್ಲಿ ಮರಳು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಎಂಎಸ್‌ಐಎಲ್ ಮೂಲಕ ಮಲೇಶಿಯಾದಿಂದ ಮರಳು ಆಮದು ಮಾಡಿಕೊಳ್ಳಲು ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿದ್ದು, ಅಲ್ಲಿಂದ ಹಡಗಿನಲ್ಲಿ ಮರಳು ಬರಲಿದೆ. ಟನ್‌ಗೆ 3,500ರೂ.ಗಳಾದರೆ 10 ಟನ್‌ಗೆ 35 ಸಾವಿರ ರೂ.ಗಳಾಗಲಿದೆ. ಆದರೆ, ರಾಜ್ಯದ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ 10 ಟನ್ ಮರಳಿಗೆ 70 ಸಾವಿರದಿಂದ 1ಲಕ್ಷ ರೂ.ಗಳಿದೆ ಎಂದು ವಿವರಿಸಿದರು.
ಮನೆ ಕಟ್ಟಲಿರುವ ಸಾರ್ವಜನಿಕರು ಮನೆ ನಕ್ಷೆ, ಅಂದಾಜು ವೆಚ್ಚ, ಅಗತ್ಯವಿರುವ ಮರಳೆಷ್ಟು ಎಂಬ ಬಗ್ಗೆ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದಿರಬೇಕು. ಈ ದಾಖಲೆಗಳನ್ನು ಸಲ್ಲಿಸಿ ಮರಳನ್ನು ಪಡೆಯಬಹುದು. ಆದರೆ, ವಿದೇಶದಿಂದ ಆಮದು ಮಾಡಿಕೊಂಡ ಮರಳನ್ನು ರಿಯಲ್ ಎಸ್ಟೇಟ್ ದಂಧೆಕೋರರಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿನ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸಿ, ನದಿ-ಹಳ್ಳಕೊಳ್ಳಗಳನ್ನು ಉಳಿಸುವ ದೃಷ್ಟಿಯಿಂದ ಮರಳು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದ ಅವರು, ಕರಾವಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಲು ಶೀಘ್ರದಲ್ಲೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಂದ್ರಕ್ಕೆ ಮನವಿ: ಹದಿಮೂರು ವರ್ಷಗಳಿಂದ ಸತತ ಬರ ಸ್ಥಿತಿ ಆವರಿಸಿದ್ದು, ಪ್ರಸಕ್ತ ವರ್ಷವೂ ಭೀಕರ ಸ್ವರೂಪದ ಬರ ಪರಿಸ್ಥಿತಿ ಇದೆ. ತೀವ್ರ ಸ್ವರೂಪದ ಅಂತರ್ಜಲ ಕುಸಿತದಿಂದ ರಾಜ್ಯದಲ್ಲಿನ 1.83 ಕೋಟಿ ಅಡಿಕೆ ಮತ್ತು 45 ಲಕ್ಷದಷ್ಟು ತೆಂಗಿನ ಮರಗಳು ಸಂಪೂರ್ಣ ನೆಲಕಚ್ಚಿವೆ. ಆದುದರಿಂದ ಕೂಡಲೇ ಸೂಕ್ತ ಪರಿಹಾರ ನೀಡಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಆ.15ರೊಳಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದ ಸಂಪುಟ ಉಪ ಸಮಿತಿ ನೇತೃತ್ವದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದು, ಅಗತ್ಯ ಬಿದ್ದರೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯದ ನೆರವಿಗೆ ಧಾವಿಸಲು ಮನವಿ ಮಾಡಲಾಗುವುದು ಎಂದರು.
ಆ.14ಕ್ಕೆ ಸರ್ವಪಕ್ಷ ಸಭೆ: ಕಾವೇರಿ, ಮಹಾದಾಯಿ ವಿವಾದ ಇತ್ಯರ್ಥ ಸಂಬಂಧ ಸಿಎಂ ಅಧ್ಯಕ್ಷತೆಯಲ್ಲಿ ಆ.14ಕ್ಕೆ ಸರ್ವಪಕ್ಷ ಮುಖಂಡರ ಸಭೆ ಕರೆಯಲಾಗಿದೆ. ಅಲ್ಲದೆ, ಅದಕ್ಕೂ ಮೊದಲೇ ಕಾವೇರಿ ಜಲಾನಯನ ಪ್ರದೇಶಕ್ಕೆ ನೀರು ಹರಿಸುವ ಸಂಬಂಧ ಆ.9ಕ್ಕೆ ಮಂಡ್ಯ ಜಿಲ್ಲಾ ಜನಪ್ರತಿನಿಧಿಗಳ ಸಭೆ ನಡೆಸಲಾಗುವುದು ಎಂದರು.
ಕೇಂದ್ರದ ಅಧಿಕಾರ: ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ ಹೆದ್ದಾರಿ ವ್ಯಾಪ್ತಿಯಲ್ಲಿ ನೋಟಿಫೈ ಮತ್ತು ಡಿನೋಟಿಫೈ ಸಂಬಂಧ ಕೇಂದ್ರ ಸರಕಾರಕ್ಕೆ ಅಧಿಕಾರವಿದೆ. ಆದರೂ, ಕೋರ್ಟ್ ಸೂಕ್ತ ತೀರ್ಮಾನ ಪ್ರಕಟಿಸಬೇಕಿದೆ ಎಂದರು.
ಕೇಂದ್ರ ಎಸ್‌ಟಿಆರ್‌ಎಫ್‌ನಡಿ ಐದು ವರ್ಷಗಳಲ್ಲಿ ರಾಜ್ಯಕ್ಕೆ 1,575 ಕೋಟಿ ರೂ. ನೀಡಿದ್ದು, ವಾರ್ಷಿಕ 300 ಕೋಟಿ ರೂ.ಗಳನ್ನು ನೀಡಿದೆ. ಆದರೆ, ಮಹಾರಾಷ್ಟ್ರ, ರಾಜಸ್ಥಾನಕ್ಕೆ ಮೂರು ಪಟ್ಟು ಜಾಸ್ತಿ ನೀಡಿದ್ದು, ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ.
-ಟಿ.ಬಿ.ಜಯಚಂದ್ರ, ಕಾನೂನು ಸಚಿವ