×
Ad

ಎಲ್ಲ ವದಂತಿಗಳಿಗೆ ಸೂಕ್ತ ಸಮಯದಲ್ಲಿ ಉತ್ತರ: ಡಿಕೆಶಿ

Update: 2017-08-07 20:04 IST

ಬೆಂಗಳೂರು, ಆ.7: ಆದಾಯ ತೆರಿಗೆ ಇಲಾಖೆ ನೀಡಿದ್ದ ಸಮನ್ಸ್ ಪ್ರಕಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಅವರ ಸಹೋದರ ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ಎಸ್.ರವಿ ಹಾಗೂ ಜ್ಯೋತಿಷಿ ದ್ವಾರಕನಾಥ್ ವಿಚಾರಣೆಗೆ ಹಾಜರಾಗಿದ್ದರು.

ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆದಾಯ ತೆರಿಗೆ ಇಲಾಖೆಯ ಪ್ರಾದೇಶಿಕ ಕಚೇರಿಗೆ ಹಾಜರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರರನ್ನು ಅಧಿಕಾರಿಗಳು ಸುಮಾರು 3 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿ ಹಲವಾರು ಪ್ರಶ್ನೆಗಳನ್ನು ಕೇಳಿ, ಉತ್ತರವನ್ನು ಪಡೆದುಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆಯ ವಿಚಾರಣೆ ಪೂರ್ಣಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಉದ್ಯಮಿಗಳು, ಆರ್ಥಿಕ ವ್ಯವಹಾರ ಗಳನ್ನು ನಡೆಸುವವರಿಗೆ ಸಮನ್ಸ್ ನೀಡಿ ವಿವರಣೆ ಕೇಳುವ ಅಧಿಕಾರ ಆದಾಯ ತೆರಿಗೆ ಇಲಾಖೆಗಿದೆ. ಅದರಂತೆ, ನಮಗೂ ಸಮನ್ಸ್ ನೀಡಿ ಬರಲು ಹೇಳಿದ್ದರು ಎಂದರು.

 ಈ ಹಿಂದೆಯೂ ಹಲವು ಬಾರಿ ನಾನು ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಭೇಟಿ ನೀಡಿದ್ದೇನೆ. ಇವತ್ತು 11 ಗಂಟೆಯ ನಂತರ ಬರುವಂತೆ ಸಮನ್ಸ್ ನೀಡಿದ್ದರು. ಕೆಲವು ದಾಖಲೆಗಳನ್ನು ಒದಗಿಸುವಂತೆ ಕೇಳಿದ್ದು, ಅವುಗಳನ್ನು ಒದಗಿಸುವಂತೆ ನಮ್ಮ ಆಡಿಟರ್(ಲೆಕ್ಕಪರಿಶೋಧಕರು)ಗೆ ತಿಳಿಸಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.

ನಾಳೆ ಅಥವಾ ನಾಳಿದ್ದು ಮತ್ತೆ ಬರುವಂತೆ ಹೇಳಿಲ್ಲ. ಅಗತ್ಯವಿದ್ದರೆ ಮತ್ತೆ ಬರಲು ತಿಳಿಸುತ್ತೇವೆ ಎಂದಿದ್ದಾರೆ. ನಮ್ಮ ಒಳ್ಳೆಯದಕ್ಕೆ ಅವರು ವಿಚಾರಣೆ ಮಾಡಿದ್ದಾರೆ. ಅಲ್ಲದೆ, ಕೆಲವು ಮಾರ್ಗದರ್ಶನವನ್ನು ನೀಡಿದ್ದಾರೆ. ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ ಎಂದು ಅವರು ಹೇಳಿದರು.

 ನನ್ನ ಮನೆ ಹಾಗೂ ಸಂಬಂಧಿಕರು, ಸ್ನೇಹಿತರ ಮೇಲೆ ನಡೆದಿರುವ ದಾಳಿಗೆ ಸಂಬಂಧಿಸಿದಂತೆ ಹಾಗೂ ರಾಜಕೀಯ ವಿಚಾರವನ್ನು ಈಗ ಮಾತನಾಡುವುದಿಲ್ಲ. ಏನೇನು ಸುದ್ದಿಗಳು ಹರಿದಾಡುತ್ತವೋ ಹರಿದಾಡಲಿ, ಎಲ್ಲದಕ್ಕೂ ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸುತ್ತೇನೆ. ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದು ಶಿವಕುಮಾರ್ ತಿಳಿಸಿದರು.

ಜ್ಯೋತಿಷಿ ದ್ವಾರಕಾನಾಥ್ ಮಾತನಾಡಿ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸುತ್ತಿರುವ ತನಿಖೆಗೆ ಸಹಕಾರ ನೀಡಿದ್ದೇನೆ. ವಿಚಾರಣೆ ಸಂದರ್ಭದಲ್ಲಿ ಏನು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದನ್ನು ಈಗ ಬಹಿರಂಗಪಡಿಸುವಂತಿಲ್ಲ ಎಂದರು.

ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ಸಂದರ್ಭದಲ್ಲಿ ಸಿಕ್ಕಿರುವ ಆಸ್ತಿಪಾಸ್ತಿಗಳು, ಹೂಡಿಕೆ, ಉದ್ಯಮಗಳಿಗೆ ಸಂಬಂಧಿಸಿದಂತೆ ಸಿಕ್ಕಿರುವ ಅಪಾರ ಪ್ರಮಾಣದ ದಾಖಲಾತಿಗಳು, ಅವರ ಸಂಬಂಧಿಕರು, ಪಾಲುದಾರರು, ಆಪ್ತರ ಮನೆಯಲ್ಲಿ ಸಿಕ್ಕಿರುವ ದಾಖಲಾತಿಗಳು, ಬ್ಯಾಂಕ್ ಖಾತೆಯ ವಿವರಣೆಗಳು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News