ಅಂಬೇಡ್ಕರ್ ಭವನವನ್ನು ನಗರಸಭೆಯಿಂದ ವಿಮುಕ್ತಗೊಳಿಸಲು ಒತ್ತಾಯ
ಚಿಕ್ಕಮಗಳೂರು, ಆ.4: ಡಾ.ಬಿ.ಆರ್. ಅಂಬೇಡ್ಕರ್ ಭವನವನ್ನು ನಗರಸಭೆಯಿಂದ ವಿಮುಕ್ತಗೊಳಿಸಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾಹಿಸಲು ವುತ್ತು ಅಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ನಡೆಸಲು ಒತ್ತಾಯಿಸಿ ದಲಿತ/ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾಯಿಸಲು ದಲಿತ ಪರ ಸಂಘಟನೆಗಳು ಒತ್ತಾಯಿಸಿದೆ. ಅದರಂತೆ ವರ್ಗಾವಣೆಗೆ ಜಿಲ್ಲಾಧಿಕಾರಿ ಸಭೆಯಲ್ಲಿ ಹಾಗೂ ಅಂಬೇಡ್ಕರ್ ಭವನದ ನಿರ್ವಾಹಣ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ 7-8 ತಿಂಗಳಾದರೂ ವರ್ಗಾಯಿಸಲು ಕ್ರಮ ಕೈಗೊಳ್ಳದ್ದರಿಂದ ತಕ್ಷಣ ಈ ಬಗ್ಗೆ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ಸುಮಾರು 5 ಸಾವಿರ ಮಂದಿಗೆ ಅಡುಗೆ ತಯಾರಿಸುವ ಪಾತ್ರೆ ಮತ್ತು ಸಾಮಾಗ್ರಿಗಳಿದ್ದವು. ಈಗ 500 ಜನರಿಗೂ ಅಡುಗೆ ತಯಾರಿಸಲು ಪರಿಕರಗಳು ಭವನದಲ್ಲಿ ಇಲ್ಲ. ಭವನದಲ್ಲಿ ಸುಮಾರು 13 ವರ್ಷಗಳಿಂದ ಮದುವೆ ಮತ್ತು ಇತ್ಯಾದಿ ಸಮಾರಂಭಗಳು ನಡೆಯುತ್ತಿದ್ದು, ಈ ಕಾರ್ಯಕ್ರಮಗಳಿಂದ ಬರುವಂತಹ ಹಾಗೂ ಬಂದಂತಹ ಆದಾಯದ ಯಾವುದೇ ಲೆಕ್ಕಪತ್ರಗಳು ಸಾರ್ವಜನಿಕವಾಗಿ ಕೊಟ್ಟಿಲ್ಲ. ಈ ಆದಾಯದಿಂದ ಭವನದ ಅಭಿವೃದ್ಧಿ ಕೆಲಸಗಳಾಗಿಲ್ಲ. ಭವನದ ಅಕ್ಕಪಕ್ಕ ನಿವೇಶನಗಳನ್ನು ಭವನದ ಸುಪರ್ದಿಗೆ ವಹಿಸಿಲ್ಲ. ಆದ್ದರಿಂದ ಈ ಖಾಸಗಿ ನಿವೇಶನಗಳನ್ನು ಭವನದ ಸುಪರ್ದಿಗೆ ವಹಿಸಲು ಆಗ್ರಹಿಸಿದ್ದಾರೆ.
ಈ ಹಿಂದೆ ಭವನದ ದುರಸ್ಥಿಗೆಂದು ನಗರಸಭೆಯ ಶೆ.24.75 ರ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿದರಲ್ಲಿ ಅವ್ಯವಹಾರದ ಶಂಕೆ ಇದ್ದು, ಸಮಗ್ರ ತನಿಖೆ ನಡೆಸಬೇಕು. ಭವನದಲ್ಲಿ ಕುಡಿಯುವ ನೀರಿನ ಶುದ್ಧ ಘಟಕ ಅಳವಡಿಸಿಲ್ಲ. ಶೌಚಾಲಯವನ್ನು ಭವನದ ಹಿಂಬದಿಗೆ ಸ್ಥಳಾಂತರಿಸಬೇಕು. ಖಾಸಗಿ ವ್ಯಕ್ತಿಗಳ ವಾಹನಗಳು ಭವನದ ಕಾಂಪೌಂಡ್ ಒಳಗಡೆ ನಿಲ್ಲಿಸುವುದನ್ನು ತಡೆಯಬೇಕು. ಇಂತಹ ಹಲವು ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಈ ಸಮಯದಲ್ಲಿ ದಸಂಸ ಮುಖಂಡರಾದಕೆ.ಸಿ. ವಂಸತ್ ಕುಮಾರ್, ಕೆ.ಮಂಜಯ್ಯ, ಜಿ.ಡಿ.ಲೋಕೇಶ್, ಎಸ್.ಡಿ.ಪುಟ್ಟಸ್ವಾಮಿ, ಎನ್.ಪಿ.ಈಶ್ವರ್, ಮರ್ಲೆ ಅಣ್ಣಯ್ಯ ಮೋಹನ್ ಕುಮಾರ್, ಚಂದ್ರಯ್ಯ, ಎಂ. ಹಂಪಯ್ಯ, ಬಿ.ಧಮೇಶ್, ಮಕೋಧರ ಕೆ.ಹೆಚ್ ಉಪಸ್ಥಿತರಿದ್ದರು.