ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ಜಾರಿಗೆ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು, ಆ.7: ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ನೀಡಿದ ವರದಿಯನ್ನಾಧರಿಸಿ ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ಜಾರಿಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ನೀತಿ ಜಾರಿಗೊಳಿಸುವ ಸಂಬಂಧ ಸಚಿವ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ಅದಕ್ಕೆ 59.68 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ತಿಳಿಸಿದರು.
ಸಾಂಸ್ಕೃತಿಕ ನೀತಿಯ ಪ್ರಮುಖಾಂಶಗಳು: ರಾಜ್ಯದ ಕಲಾವಿದರಿಗೆ, ಸಾಹಿತಿಗಳಿಗೆ ಮಾಸಾಶನ, ಸಾಂಸ್ಕೃತಿಕ ಸಂಸ್ಥೆಗಳಿಗೆ ಧನ ಸಹಾಯ, ಗಡಿಭಾಗದ ಅಭಿವೃದ್ಧಿ, ಪ್ರಶಸ್ತಿ ವಿತರಣೆ, ಅಕಾಡಮಿ, ಪ್ರಾಧಿಕಾರಗಳ ಸಬಲೀಕರಣ, ವಿಭಾಗೀಕರಣ, ಹೆಸರು ಬದಲಾವಣೆ, ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರಕ್ಕೆ ಒತ್ತು.
ಆಧುನಿಕ ತಂತ್ರಜ್ಞಾನ, ತಂತ್ರಾಶ ಅಭಿವೃದ್ಧಿ, ರಂಗಾಯಣಗಳ ರಚನೆ, ಕಾಲೇಜು ರಂಗೋತ್ಸವ, ಜಾನಪದ ಕಲಾಕೃತಿಗಳ ಮಾರಾಟ ಕೇಂದ್ರ ಆರಂಭ, ಸೂಫಿ ಸಂತರು ತತ್ವಪದಗಳ ಪ್ರಚಾರ, ಬುಡಕಟ್ಟು ವಿಶ್ವವಿದ್ಯಾಲಯ ರಚನೆ, ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಸೇರಿದಂತೆ ಇನ್ನಿತರ ಪ್ರಮುಖ ಅಂಶಗಳು ಸಾಂಸ್ಕೃತಿಕ ನೀತಿ ರಚನೆ ಸಂಬಂಧದ ವರದಿಯಲ್ಲಿದೆ ಎಂದು ಅವರು ವಿವರಿಸಿದರು.
ಪ್ರತಿಯೊಂದು ಕಂದಾಯ ವಿಭಾಗದಲ್ಲಿ 7.25 ಕೋಟಿ ರೂ.ಘಟಕ ವೆಚ್ಚದಲ್ಲಿ ಆಧುನಿಕ ಕಸಾಯಿಖಾನೆಯನ್ನು ಸ್ಥಾಪಿಸುವ ಬಗ್ಗೆ ಮತ್ತು 29 ಕೋಟಿ ರೂ.ವೆಚ್ಚದಲ್ಲಿ ಒಟ್ಟು 4 ಆಧುನಿಕ ಕಸಾಯಿಖಾನೆ ಘಟಕಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಪ್ರಥಮ ಹಂತದಲ್ಲಿ ಬೆಳಗಾವಿಯ ಹಿರೇಬಾಗೆವಾಡಿಯಲ್ಲಿ 14.8 ಎಕರೆ ಪ್ರದೇಶದಲ್ಲಿ ಹಾಗೂ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತಿಪ್ಪಾಗುಡಿ ಗ್ರಾಮದ 10 ಎಕರೆ ಪ್ರದೇಶದಲ್ಲಿ ಕುರಿ ಮತ್ತು ಮೇಕೆಗಳ ಆಧುನಿಕ ಕಸಾಯಿಖಾನೆ ಘಟಕಗಳ ಸ್ಥಾಪನೆಯಾಗಲಿದೆ ಎಂದು ಅವರು ಹೇಳಿದರು.
ಕಾಲುಬಾಯಿ ರೋಗ ಲಸಿಕೆ ತಯಾರಿಕೆ ಘಟಕವನ್ನು 100 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಹಿಂದೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಯಾವುದೆ ರೀತಿಯ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಯಲಹಂಕದಲ್ಲಿ ಲಭ್ಯವಿರುವ 115 ಎಕರೆ ಪ್ರದೇಶದಲ್ಲಿ ರಾಜ್ಯ ಸರಕಾರವೆ ಈ ಘಟಕ ಸ್ಥಾಪಿಸಲು ತೀರ್ಮಾನಿಸಿದೆ ಎಂದು ಜಯಚಂದ್ರ ತಿಳಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸುವ ಉದ್ದೇಶಕ್ಕಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ 2017-18ನೆ ಸಾಲಿನಲ್ಲಿ 30 ಕೋಟಿ ರೂ.ಗಳ ಸಾಲ ಪಡೆಯಲು ಸರಕಾರದ ಖಾತರಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
2030-31ಕ್ಕೆ ರಾಜ್ಯದಲ್ಲಿ ಕಬ್ಬಿಣದ ಅದಿರು ಬಳಕೆ, ನಿರ್ವಹಣೆಗೆ ಎಂಇಸಿಎಲ್ ಮೂಲಕ ಗಣಿಗಾರಿಕೆಯ ಕ್ರಿಯಾ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸ ಲಾಗಿದೆ. ಅಲ್ಲದೆ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ರಮಣದುರ್ಗ ಬ್ಲಾಕ್ ನಂ.13/1ರ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ 150 ಎಕರೆ ಪ್ರದೇಶವನ್ನು ಸಾರ್ವಜನಿಕ ಉದ್ದಿಮೆಯಾದ ಭದ್ರಾವತಿಯ ವಿಐಎಸ್‌ಎಲ್/ಎಸ್‌ಎಐಎಲ್‌ಗೆ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು. ಎಚ್‌ಎಎಲ್ ಸಂಸ್ಥೆಯು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬಿದರಹಳ್ಳಿ ಕಾವಲ್ ಸರ್ವೆ ನಂಬರ್ 1ರಲ್ಲಿ 610 ಎಕರೆ ಪ್ರದೇಶದಲ್ಲಿ ಸುಮಾರು 4 ಸಾವಿರ ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೆಲಿಕಾಪ್ಟರ್ ಘಟಕಕ್ಕೆ ಕಡಬ ಕೆರೆಯಿಂದ 43.77 ಎಂಸಿಎಫ್ ನೀರು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ಸಂಗೊಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 100 ಎಕರೆ ಸರಕಾರಿ ಜಮೀನನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಉಚಿತವಾಗಿ ಮಂಜೂರು ಮಾಡಿ, ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ ಸ್ಥಾಪಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಕೇಂದ್ರ ಪುರಸ್ಕೃತ ರಾಜ್ಯ ನಿರ್ವಹಣೆಯ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ(2016-2020) ರಾಜ್ಯ ಪಿಎಂಕೆವಿವೈ 2.0 ಯೋಜನೆಗೆ ಅನುಮೋದನೆ ನೀಡಲಾಗಿದೆ. 94 ಸಾವಿರ ಯುವಕರಿಗೆ ಕೌಶಲ ತರಬೇತಿ ನೀಡಲು 198 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಸಿಎಂಎಸ್‌ಎಂಟಿಡಿಪಿ 2ನೆ ಹಂತದ ಯೋಜನೆಯಡಿ ತುಮಕೂರು ಜಿಲ್ಲೆಯ ಶಿರಾ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ 24.21 ಕೋಟಿ ರೂ.ಗಳ ಪರಿಷ್ಕೃತ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ಎಡದಂಡೆ ನಾಲೆಯ ಆಧುನೀಕರಣದ ಕಾಮಗಾರಿಯ 49 ಕೋಟಿ ರೂ.ಗಳ ಹಾಗೂ ಬಲದಂಡೆ ನಾಲೆಯ ಆಧುನೀಕರಣದ ಕಾಮಗಾರಿಯ 17 ಕೋಟಿ ರೂ.ಗಳ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಅವರು ತಿಳಿಸಿದರು.
ಹಾರೋಹಳ್ಳಿ ಮೇಲ್ಮಟ್ಟದ ನಾಲೆಯ ಆಧುನೀಕರಣ ಕಾಮಗಾರಿಯ 27.80 ಕೋಟಿ ರೂ.ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.