ಎಸ್ಸಿ-ಎಸ್ಟಿ ನೌಕರರಿಗೆ ಭಡ್ತಿ ಮೀಸಲಾತಿ : ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ನಿರ್ಣಯ

Update: 2017-08-07 15:52 GMT

ಬೆಂಗಳೂರು, ಆ.7: ಸುಪ್ರೀಂಕೋರ್ಟ್ ಆದೇಶದ ವಿರುದ್ಧವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರಿಗೆ ಭಡ್ತಿ ಮೀಸಲಾತಿ ಮುಂದುವರೆಸಲು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರಕಾರ ಮುಂದಾಗಿದೆ.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಈ ಸಂಬಂಧ ವಿವರಣೆಯನ್ನು ನೀಡಿದರು.

 ಎಸ್ಸಿ-ಎಸ್ಟಿ ನೌಕರರಿಗೆ ಭಡ್ತಿ ಮೀಸಲಾತಿಯನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಭಡ್ತಿ ಮೀಸಲಾತಿ ಜಾರಿಗೊಳಿಸಿದ 1978ರ ಕಾಯ್ದೆಯ ಸೆಕ್ಷನ್ 3 ಮತ್ತು 4 ಅನ್ನು ಯಥಾವತ್ತಾಗಿ ಉಳಿಸಿಕೊಂಡು ಹೊಸದಾಗಿ ಸೆಕ್ಷನ್ 5ಕ್ಕೆ ತಿದ್ದುಪಡಿ ತಂದು ಸುಗ್ರಿವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಭಡ್ತಿ ಮೀಸಲಾತಿಗೆ ಸಂಬಂಧಿಸಿ ರಾಜ್ಯ ಸರಕಾರದ ಕ್ರಮವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ವಿಶೇಷ ಮೇಲ್ಮನವಿಯ ವಿಚಾರಣೆಯು ಇದೇ 9ರಂದು ನಡೆಯಲಿದ್ದು, ಅಷ್ಟರೊಳಗಾಗಿ ಸುಗ್ರೀವಾಜ್ಞೆ ಹೊರಡಿಸಲು ಸರಕಾರ ಮುಂದಾಗಿದ್ದು, ಇಂದು ರಾತ್ರಿ ಅಥವಾ ನಾಳೆ ರಾಜ್ಯಪಾಲರಿಗೆ ಸುಗ್ರೀವಾಜ್ಞೆಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಲಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಸುಗ್ರಿವಾಜ್ಞೆ ಜಾರಿಗೊಳಿಸಿದರೂ ಯಾವುದೆ ಸರಕಾರಿ ನೌಕರರಿಗೆ ಹಿಂಭಡ್ತಿ ನೀಡಬಾರದು. ಭಡ್ತಿಯಲ್ಲಿ ಮೀಸಲಾತಿ ನೀಡುವಾಗ ಸೂಪರ್ ನ್ಯೂಮರಿಕ್ ಹುದ್ದೆಗಳನ್ನು ಸೃಷ್ಟಿಸಲು ಸರಕಾರ ನಿರ್ಧರಿಸಿದೆ. ಸುಗ್ರಿವಾಜ್ಞೆ ಜಾರಿಗೊಳಿಸುವುದರಿಂದ ಯಾರಿಗೂ ಅನ್ಯಾಯವಾಗಬಾರದು ಎಂಬುದು ಸರಕಾರದ ನಿಲುವು ಎಂದು ಜಯಚಂದ್ರ ತಿಳಿಸಿದರು.

ಕೆ.ನಾಗರಾಜ್ ಹಾಗೂ ಪವಿತ್ರಾ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ರಾಜ್ಯ ಸರಕಾರವು ಮೂರು ಆದ್ಯತೆಗಳನ್ನು ಗುರುತಿಸಿದೆ. ಅಸಮರ್ಪಕತೆ, ಹಿಂದುಳಿದಿರುವಿಕೆ ಹಾಗೂ ದಕ್ಷತೆ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅಧ್ಯಕ್ಷತೆಯಲ್ಲಿ ಸರಕಾರ ಸಮಿತಿಯನ್ನು ರಚಿಸಿತ್ತು ಎಂದು ಅವರು ಹೇಳಿದರು.

ಈ ಸಮಿತಿ ನೀಡಿದ್ದ ವರದಿಯನ್ನು ರಾಜ್ಯ ಕಾನೂನು ಆಯೋಗದ ಪರಿಶೀಲನೆಗೆ ಒಳಪಡಿಸಲಾಗಿತ್ತು. ಆನಂತರ, ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗೋಪಾಲಗೌಡ ಕೂಡ ವರದಿಯನ್ನು ಪರಿಶೀಲಿಸಿ ಅನುಮೋದನೆ ನೀಡಿದ್ದಾರೆ ಎಂದು ಜಯಚಂದ್ರ ತಿಳಿಸಿದರು. ರತ್ನಾಪ್ರಭಾ ನೀಡಿರುವ ವರದಿಯನ್ನು ಕಾನೂನು ಪಂಡಿತರು ಅನುಮೋದಿಸಿ ಸುಪ್ರೀಂಕೋರ್ಟ್ ಆದೇಶದಿಂದ ಉದ್ಭವಿಸಿರುವ ಸಮಸ್ಯೆಯನ್ನು ನಿವಾರಿಸಲು ಕಾನೂನು ಜಾರಿಗೆ ತರಬೇಕು. 1978ರ ಕಾಯ್ದೆಗೆ ಮರು ಮಾನ್ಯತೆ ನೀಡುವಂತೆ ಸಲಹೆ ನೀಡಿದ್ದರು. ಅದರಂತೆ, ಸಂಪುಟ ಉಪ ಸಮಿತಿಯಲ್ಲಿ ವಿವರವಾಗಿ ಚರ್ಚಿಸಿ, ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಇಂಧನ, ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಸೇರಿದ ಸುಮಾರು 100 ಮಂದಿಗೆ ಅನುಕೂಲವಾಗುತ್ತದೆ ಎಂದು ಜಯಚಂದ್ರ ವಿವರಣೆ ನೀಡಿದರು.

ಕೆರೆಗಳ ಡಿನೋಟಿಫಿಕೇಷನ್ ಇಲ್ಲ

ನಿರ್ಜಿವ ಕೆರೆಗಳ ಡಿನೋಟಿಫಿಕೇಷನ್ ಮಾಡುವ ಸಂಬಂಧ ಕಂದಾಯ ಇಲಾಖೆಯಿಂದ ಪ್ರಸ್ತಾವನೆ ಬಂದದ್ದು ನಿಜ. ಆರಂಭದಲ್ಲೆ ನಾನು ಅದನ್ನು ವಿರೋಧಿಸಿದ್ದೇನೆ. ಈಗ ಸರಕಾರದ ಮುಂದೆ ಅಂತಹ ಯಾವುದೆ ಪ್ರಸ್ತಾವನೆಗಳು ಇಲ್ಲ.

-ಟಿ.ಬಿ.ಜಯಚಂದ್ರ,ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News