ಗಾಂಧಿವಾದಿ ಸುರೇಂದ್ರ ಕೌಲಗಿ ನಿಧನ
ಮಂಡ್ಯ , ಆ.7: ಹಿರಿಯ ಗಾಂಧಿವಾದಿ, ಸಮಾಜಸೇವಕ ಸುರೇಂದ್ರ ಕೌಲಗಿ(84) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ತಡರಾತ್ರಿ ನಿಧನರಾಗಿದ್ದಾರೆ. ಸೋಮವಾರ ಮೇಲುಕೋಟೆಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.
ಮೂಲತಃ ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದವರಾದ ಕೌಲಗಿ, ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಪದ ಸೇವಾ ಟ್ರಸ್ಟ್ ಸ್ಥಾಪನೆ ಮೂಲಕ ಸಮಾಜ ಸೇವೆ ಮಾಡಿಕೊಂಡು, ಗಾಂಧಿ ಚಿಂತನೆಗಳ ಪ್ರಚಾರಕಾಗಿದ್ದರು.
ಸರ್ವೋದಯ ನಾಯಕ ಆಚಾರ್ಯ ವಿನೋಬಾ ಭಾವೆ, ಜಯಪ್ರಕಾಶ್ ನಾರಾಯಣ್ ಅವರು ಜತೆ ಕೆಲಸ ಮಾಡಿದ್ದ ಕೌಲಗಿ ಅವರಿಗೆ 2013ರಲ್ಲಿ ದಾಸಿಮಯ್ಯ ಪ್ರಶಸ್ತಿ, 2014ರಲ್ಲಿ ರಾಷ್ಟ್ರಮಟ್ಟದ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಸಂದಿದ್ದವು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಸಂಸದ ಸಿ.ಎಸ್.ಪುಟ್ಟರಾಜು, ಸಾಹಿತಿ ತೈಲೂರು ವೆಂಕಟಕೃಷ್ಣ, ಗಾಂಧಿವಾದಿ ಲಿಂಗಣ್ಣ ಬಂಧುಕರ್, ಜಿಪಂ ಸದಸ್ಯ ಎ.ತ್ಯಾಗರಾಜು, ಉಪವಿಭಾಗಾಧಿಕಾರಿ ಯಶೋಧ, ತಹಸೀಲ್ದಾರ್ ಹನುಮಂತರಾಯಪ್ಪ, ಪ್ರೊ.ಹುಲ್ಕೆರೆ ಮಹದೇವು, ಇತರ ಗಣ್ಯರು ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಪುಟ್ಟಣ್ಣಯ್ಯ, ಕೌಲಗಿ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಮೇಲುಕೋಟೆಯ ಬಡಾವಣೆಯೊಂದಕ್ಕೆ ಕೌಲಗಿ ಅವರ ಹೆಸರು ನಾಮಕರಣ ಮಾಡಲಾಗುವುದು. ಆ.10 ರಂದು ಮೇಲುಕೋಟೆಯಲ್ಲಿ ಸ್ಮರಣೆ ಕಾರ್ಯಕ್ರಮ ನಡೆಸಲಾಗುವುದು ಎಂದರು.