ಆ.10: ವಿಚಾರ ಸಂಕಿರಣ

Update: 2017-08-07 16:55 GMT

ಚಿಕ್ಕಬಳ್ಳಾಪುರ, ಆ.7: ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಜಿಲ್ಲಾ ಸಮಿತಿಯಿಂದ ಆ.10 ರಂದು ನಗರದ ಅಂಬೇಡ್ಕರ್ ಭವನದಲ್ಲಿ ಕೋಮುವಾದವನ್ನು ಹಿಮ್ಮೆಟ್ಟಿಸಿ ಕರ್ನಾಟಕವನ್ನು ಉಳಿಸಿ ವಿಷಯ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ. ಅಂಬರೀಷ್ ತಿಳಿಸಿದರು.

ನಗರದ ಪರ್ತಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ, ದೇಶದಲ್ಲಿ ಶಾಂತಿ ತಲೆದೂರಿದೆ. ಹಲವು ವರ್ಷಗಳ ಹೋರಾಟದ ಫಲವಾಗಿ ಸಿಕ್ಕಿರುವ ಅಮೂಲ್ಯವಾದ ರಾಷ್ಟ್ರೀಯತೆ, ಏಕತೆಯನ್ನು ಕೆಲ ಮತಾಂಧ ಮೂಲಭೂತವಾದಿಗಳು ನಾವೆಲ್ಲರೂ ಭಾರತೀಯರು ಎನ್ನುವುದಕ್ಕಿಂತ ನಾವು ಹಿಂದುಗಳು, ಮುಸ್ಲೀಂರು, ಸಿಕ್ಕರು, ಕ್ರೀಶ್ಚಿಯನ್ನರು ಎಂಬ ಜಾತಿಯ ವಿಷಭೀಜ ಬಿತ್ತುವ ಮೂಲಕ ದೇಶವನ್ನು ವಿಭಜನೆ ಮಾಡುವ ಕೃತ್ಯಕ್ಕೆ ಕೈಹಾಕಿದ್ದು, ಸಾಮಾಜಿಕ ಮತ್ತು ಧಾರ್ಮಿಕ ಗುರುತುಗಳ ಆಧಾರದ ಮೇಲೆ ನಾಗರೀಕರ ಮೇಲೆ ಆಕ್ರಮಣಗಳು ನಡೆಯುತ್ತಿವೆ. ಈ ದಿಸೆಯಲ್ಲಿ ನಾವು ಮತ್ತೊಮ್ಮೆ ದೀರ್ಘಕಾಲದ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಳ್ಳುವಂತ ದುಸ್ಥಿತಿ ಒಂದೋದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮತಾಂಧ ಕೋಮುವಾದಿ ಶಕ್ತಿಗಳು ಇಂದು ದೇಶದ ಅತ್ಯುನ್ನತ ಸಂವಿಧಾನಿಕ ಸ್ಥಾನಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಇದರಿಂದ ದೇಶಾಧ್ಯಂತ ಕೋಮುಗಲಭೆಗಳು ಸೃಷ್ಠಿಯಾಗುತ್ತಿದೆ. ಗೋವಿನ ಹೆಸರಲ್ಲಿ ಮನುಷ್ಯರ ಹತ್ಯೆ ನಡೆಯುತ್ತಿವೆ. ತಮ್ಮ ಪ್ಯಾಸಿಸ್ಟ್ ಸಿದ್ಧಾಂತಗಳನ್ನು ಕಾರ್ಯಾಗತಗೊಳಿಸಲು ಜನರ ಧಾರ್ಮಿಕ ನಂಬಿಕೆಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಮತ್ತೊಮ್ಮೆ ದೇಶವು ತನ್ನ ಸಾರ್ವಭೌಮತೆ, ಐಕ್ಯತೆ ಕಳೆದುಕೊಳ್ಳುವ ಅಪಾಯದಲ್ಲಿದ್ದು, ಇದು ಕರ್ನಾಟಕದಲ್ಲೂ ಹೊರೆತಾಗಿಲ್ಲ ಎಂದ ಅವರು, ಕ್ವಿಟ್ ಇಂಡಿಯಾ ಚಳುವಳಿ ಹಾಗೂ 70ರ ಸ್ವಾತಂತ್ರ ದಿನಾಚರಣೆ ಅಂಗವಾಗಿ ಆ.8 ರಿಂದ 15 ರವರೆಗೆ ಎಸ್‌ಎಫ್‌ಐ ವತಿಯಿಂದ ಪ್ರೀಡಂ ವೀಕ್ ಎಂಬ ಶಿರ್ಷಿಕೆಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ನಗರದಲ್ಲಿ ಆ.10 ರಂದು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.

ವಿಚಾರಸಂಕಿರಣವನ್ನು ಮುಖ್ಯಮಂತ್ರಿಗಳ ಮಾದ್ಯಮ ಸಲಹೆಹಾರ ದಿನೇಶ್ ಅಮೀನ್ ಮಟ್ಟು ಅವರು ಉದ್ಘಾಟಿಸಲಿದ್ದು, ಬಾಗೇಪಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಂ.ನಯಾಜ್ ಅಹಮ್ಮದ್ ಅವರು ಅಧ್ಯಕ್ಷತೆ ವಹಿಸುವರು ಎಂದು ಇದೇ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎ.ಸೋಮಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News